Sunday, May 6, 2018


ಕಳವು ಪ್ರಕರಣ
          ಮಡಿಕೇರಿ ನಗರದ ದೇಚೂರು ಎಂಬಲ್ಲಿ ಮನೆಗೆ ಕಳ್ಳರು ನುಗ್ಗಿ ಕಳವು ಮಾಡಿರುವ ಘಟನೆ ವರದಿಯಾಗಿದೆ. ದಿನಾಂಕ 14-04-2018 ರಂದು ದೇಚೂರುವಿನ ನಿವಾಸಿ ಜಯ ಅಪ್ಪಚ್ಚು ಗಣಪತಿಯವರು ಬೆಂಗಳೂರಿಗೆ ಹೋಗಿದ್ದು, ಅವರ ಮನೆಯಲ್ಲಿ ಬಾಡಿಗೆಗೆ ಇರುವ ನಾಗರಾಜುರವರು ಸಹಾ ಮಂಡ್ಯ ಜಿಲ್ಲೆಗೆ ಹೋಗಿದ್ದು, ದಿನಾಂಕ 03-05-2018 ರ ನಡುವೆ ಯಾರೊ ಕಳ್ಳರು ನಾಗರಾಜುರವರ ಮನೆಯ ಬಾಗಿಲಿನ ಚಿಲಕವನ್ನು ಮುರಿದು ಒಳನುಗ್ಗಿ ನಾಗರಾಜುರವರ ಮನೆಯಿಂದ 40,000 ರೂ ನಗದು ಹಣವನ್ನು ಹಾಗು ನಾಗರಾಜುರವರ ಮನೆಯ ಒಳಗಿನಿಂದ ಜಯಅಪ್ಪಚ್ಚು ಗಣಪತಿಯವರ ಮನೆಗೆ ಬಾಗಿಲಿನ ಮೂಲಕ ಒಳ ಹೋಗಿ ಹಾಲ್‍ ನ ಮುಂಭಾಗದಲ್ಲಿ ಇಟ್ಟಿದ್ದ 6 ಬಂದೂಕುಗಳ ಪೈಕಿ ಒಂದು .22 ರೈಫಲ್, ಒಂದು ಡಿ.ಬಿ.ಬಿ.ಎಲ್ ಬಂದೂಕು ಹಾಗೂ 2 ಮದ್ಯದ ಬಾಟಲಿಗಳನ್ನು ಕಳವುಮಾಡಿಕೊಂಡು ಹೋಗಿದ್ದು ಈ ಬಗ್ಗೆ ದಿನಾಂಕ 05-05-2018 ನೀಡಿದ ಪುಕಾರಿನ ಮೇರೆಗೆ ಮಡಿಕೇರಿ ನಗರ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.
 
ಬ್ಯಾಂಕ್ ಮಾಹಿತಿ ಪಡೆದು ವಂಚನೆ
          ದಿನಾಂಕ 27-04-2018 ರಂದು ಸಿದ್ದಾಪುರದ ಕರಡಿಗೊಡುವಿನ ನಿವಾಸಿ ಜೋಸೆಫ್ ಕಿರಣ್ ಎಂಬುವವರಿಗೆ ಅನಾಮಧೇಯ ನಂಬರಿನಿಂದ ಕರೆ ಮಾಡಿ ತಾನು ಬೆಂಗಳೂರಿನ ಶಾಂತಿ ನಗರದ ಕೆನರಾ ಬ್ಯಾಂಕ್ ಶಾಖೆಯಿಂದ ಕರೆ ಮಾಡುತ್ತಿದ್ದು ನಿಮ್ಮ ಡೆಬಿಟ್ ಕಾರ್ಡ್ ನಲ್ಲಿ ತೊಂದರೆ ಇದ್ದು ಸರಿಪಡಿಸುವುದಾಗಿ ಹೇಳಿ ಡೆಬಿಟ್ ಕಾರ್ಡ್ ನ ಹಿಂಭಾಗದಲ್ಲಿರುವ CVV ನಂಬರನ್ನು ಪಡೆದುಕೊಂಡು ಖಾತೆಯಿಂದ 83,000 ರೂ ನಗದು ಹಣವನ್ನು ಡ್ರಾ ಮಾಡಿಕೊಂಡು ವಂಚಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಆತ್ಮ ಹತ್ಯೆ
          ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಡಿಕೇರಿ ತಾಲೂಕಿನ ಎಂ.ಬಾಡಗ ಗ್ರಾಮದಲ್ಲಿ ವರದಿಯಾಗಿದೆ. ಎಂ.ಬಾಡಗ ಗ್ರಾಮದ ನಿವಾಸಿಯಾದ ಕರುಂಬಯ್ಯ ಎಂಬುವವರು ಅನಾರೋಗ್ಯದಿಂದ ಬಳಲುತ್ತಿದ್ದು, ಇದೇ ವಿಚಾರದಲ್ಲಿ ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 05-05-2018 ರಂದು ತೋಟದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಆಟೋ ರಿಕ್ಷಾ ಅಪಘಾತ
          ದಿನಾಂಕ 05-05-2018 ರಂದು ಮಡಿಕೇರಿ ಪಟ್ಟಣದ ಇಂದಿರಾ ನಗರದ ನಿವಾಸಿ ಸಜನ ಎಂಬುವವರು ತಾಯಿ ಮರಿಯಮ್ಮನವರೊಂದಿಗೆ ಕೆಎ-12-ಬಿ-2903ರ ಆಟೋ ರಿಕ್ಷಾದಲ್ಲಿ ಮಡಿಕೇರಿ ನಗರದಿಂದ ಮನೆಗೆ ಹೋಗುತ್ತಿರುವಾಗ ಲಿವಾ ಕ್ಲೀನಿಕ್ ಬಳಿ ಆಟೋವನ್ನು ಚಾಲಕ ಅಜಾಗರುಕತೆಯಿಂದ ಚಾಲನೆ ಮಾಡಿ ಮಗುಚಿ ಬಿದ್ದ ಪರಿಣಾಮ ಸಜನ ಮತ್ತು ಮರಿಯಮ್ಮನವರಿಗೆ ಗಾಯಗಳಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರರಕಣ ದಾಖಲಾಗಿರುತ್ತದೆ.

ಅನಾಮದೇಯ ವ್ಯಕ್ತಿಯ ಸಾವು

           ಗೋಣೀಕೊಪ್ಪ ನಗರದಲ್ಲಿ ಸುಮಾರು 5-6 ವರ್ಷಗಳಿಂದ ಹುಬ್ಬಳ್ಳಿಯ ವ್ಯಕ್ತಿ ಸಿಕ್ಕಿದ ಕಡೆ ಕೂಲಿ ಕೆಲಸ ಮಾಡಿಕೊಂಡು ನಗರದ ಹಳೇ ಗ್ರಾಮ ಪಂಚಾಯಿತಿ ಕಛೇರಿಯ ಆವರಣದಲ್ಲಿ ಮಲಗುತ್ತಿದ್ದು, ಸದರಿ ವ್ಯಕ್ತಿಯು 2 ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದವರು ದಿನಾಂಕ 04-05-2018 ರಂದು ಮೃತಪಟ್ಟಿದ್ದು ಈ ಬಗ್ಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ವ್ಯಕ್ತಿಯ ಮೇಲೆ ಹಲ್ಲೆ
          ದಿನಾಂಕ 04-05-2018 ರಂದು ಕುಶಾಲನಗರದ ವೆಬ್ಸಾ ಶೋ ರೂಂ ನಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡಿಕೊಂಡಿರುವ ಅಬ್ಬುರುಕಟ್ಟೆ ಗ್ರಾಮದ ನಿವಾಸಿ ಯೋಗೇಶ ಎಂಬುವವರು ಮನೆಯಿಂದ ನಡೆದುಕೊಂಡು ಹೋಗುತ್ತಿರುವಾಗ ವಳಗುಂದ ಗ್ರಾಮದ ಪ್ರೀತಮ್ ಎಂಬುವವರು ಇನ್ನೊಬ್ಬನೊಂದಿಗೆ ಬಂದು ಜಗಳ ತೆಗೆದು ಮೋಟಾರು ಸೈಕಲ್ ರಿಪೇರಿ ವಿಷಯದಲ್ಲಿ ಜಗಳ ಮಾಡಿ ಚಾಕುವಿನಿಂದ ಚುಚ್ಚಿ ಗಾಯಪಡಿಸಿದ್ದು ಈ ಬಗ್ಗೆ ಸೊಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕ್ಷುಲ್ಲಕ ಕಾರಣಕ್ಕೆ ಹಲ್ಲೆ 
           ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸೋಮವಾರಪೇಟೆ ತಾಲೂಕಿನ ಮೂವತ್ತೋಕ್ಲು ಗ್ರಾಮದಿಂದ ವರದಿಯಾಗಿದೆ. ದಿನಾಂಕ 05-05-2018 ರಂದು ಮೂವತ್ತೋಕ್ಲು ಗ್ರಾಮದ ನಿವಾಸಿ ತಿಮ್ಮಯ್ಯ ಎಂಬುವವರು ಮನೆಗೆ ಬಾವಿಯಿಂದ ನೀರು ತರುತ್ತಿರುವಾಗ ಪಕ್ಕದ ಮನೆಯ ನಿವಾಸಿಗಳಾದ ಪದ್ಮ, ಪೊನ್ನಮ್ಮ, ಪವಿ, ಕಿಟ್ಟ ಹಾಗು ಅಪ್ಪಣ್ಣನವರು ಬಾವಿಯಿಂದ ನೀರು ತೆಗೆದ ವಿಚಾರದಲ್ಲಿ ಜಗಳ ಮಾಡಿ ಹಲ್ಲೆ ನಡೆಸಿದ್ದು ಈ ಬಗ್ಗೆ ತಿಮ್ಮಯ್ಯನವರು ನಿಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.