Friday, October 20, 2017

ವ್ಯಕ್ತಿ ಆತ್ಮಹತ್ಯೆ
                            ದಿನಾಂಕ 18/10/2017ರಂದು ಕುಶಾಲನಗರ ಬಳಿಯ ನಂಜರಾಯಪಟ್ಟಣ ನಿವಾಸಿ ಯಾದವಕುಮಾರ್ ಎಂಬವರು ಮನೆಯಲ್ಲಿ ಯಾವುದೋ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು ಅವರನ್ನು ಚಿಕಿತ್ಸೆಗಾಗಿ ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ 19/10/2017ರಂದು ಯಾದವಕುಮಾರ್‌ರವರು ಮೃತರಾಗಿರುವುದಾಗಿ ವರದಿಯಾಗಿದೆ. ಮೃತ ಯಾದವಕುಮಾರ್‌ರವರು ನೆರೆಹೊರೆಯವರಿಂದ ಹಾಗೂ ಬ್ಯಾಂಕಿನಲ್ಲಿ ವಿಪರೀತ ಸಾಲ ಮಾಡಿದ್ದು ತೀರಿಸಲಾಗದೆ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೀಡಿದ ದೂರಿನ  ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಅವಹೇಳನಕರ ಸಂದೇಶ, ಪ್ರಕರಣ ದಾಖಲು
                             ದಿನಾಂಕ 16/10/2017ರಂದು ನಾಪೋಕ್ಲು ಬಳಿಯ ಚೆರುಮಂದಂಡ ವಿವೇಕ್‌ ಎಂಬವರು ಅವರ ಊರಿನ ಕೆಲವರನ್ನು ಮತ್ತು ಮಾಜಿ ಸೈನಿಕರನ್ನು ಉದ್ದೇಶಿಸಿ ಅವಹೇಳನಕರವಾಗಿ ಮಾತನಾಡಿದುದನ್ನು ರೆಕಾರ್ಡ್‌ ಮಾಡಿಕೊಂಡು ವಾಟ್ಸಪ್ ಮೂಲಕ ಕಳುಹಿಸಿ ಅವಮಾನಿಸಿರುವುದಾಗಿ ಕಿರುಂದಾಡು ನಿವಾಸಿ ಮಚ್ಚಂಡ ದೇವಯ್ಯ ಎಂಬವರು ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮರಳು ಕಳವು ಪ್ರಕರಣ
                       ದಿನಾಂಕ 19/10/2017ರಂದು ನಾಪೋಕ್ಲು ಠಾಣೆಯ ಪಿಎಸ್‌ಐ ನಂಜುಂಡಸ್ವಾಮಿಯವರು ಗಸ್ತು ಕರ್ತವ್ಯದಲ್ಲಿರುವಾಗ ಬಲಮುರಿ ಗ್ರಾಮದಲ್ಲಿ ಅಕ್ರಮವಾಗಿ ಮರಳನ್ನು ಕಾವೇರಿಹೊಳೆಯಿಂದ ಕಳವು ಮಾಡಿ ಸಂಗ್ರಸಿರುವುದಾಗಿ ದೊರೆತ ಮಾಹಿತಿಯ ಮೇರೆಗೆ ಸ್ಥಳಕ್ಕೆ ತೆರಳಿದಾಗ ಬಲಮುರಿ ಗ್ರಾಮದ ಕೊಂಗೀರಂಡ ಸುಬ್ರಮಣಿ ಎಂಬವರ ತೋಟದ ಬಳಿ ಕಾವೇರಿ ಹೊಳೆಯಿಂದ ಕಬ್ಬಿಣದ ತೆಪ್ಪದ ಮೂಲಕ ಇಬ್ಬರು ಅಕ್ರಮವಾಗಿ ಮರಳನ್ನು ಸಂಗ್ರಹಿಸುತ್ತಿದ್ದು ಪೊಲೀಸರನ್ನು ಕಂಡು ಓಡಿ ಹೋಗಿದ್ದು, ಪಿಎಸ್‌ಐ ನಂಜುಂಡಸ್ವಾಮಿಯವರು ಸ್ಥಳದಲ್ಲಿದ್ದ ಒಂದು ಸ್ವರಾಜ್‌ ಮಜ್ದಾ ಲಾರಿ ಲೋಡಿನಷ್ಟು ಮರಳು, ಕಬ್ಬಿಣದ ತೆಪ್ಪ ಮುಂತಾದವುಗಳನ್ನು ವಶಪಡಿಸಿಕೊಂಡು ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹಸು ಕಳವು
                         ದಿನಾಂಕ 17/10/2017ರಂದು ಮಡಿಕೇರಿ ಬಳಿಯ ಮದೆನಾಡು ಗ್ರಾಮದ ನಿವಾಸಿ ಇಬ್ರಾಹಿಂ ಎಂಬವರ ತೋಟದಲ್ಲಿ ಮೇಯುತ್ತಿದ್ದ ಸುಮಾರು ರೂ.20,000/- ಬೆಲೆ ಬಾಳುವ ಹಸುವನ್ನು ಯಾರೋ ಕಳವು ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿಯ ಮೇಲೆ ಹಲ್ಲೆ
                    ದಿನಾಂಕ 19/10/2017ರಂದು ಮಡಿಕೇರಿಯ ಪುಟಾಣಿ ನಗರದ ನಿವಾಸಿ ಚಂದ್ರು ಎಂಬವರು ಪುಟಾಣಿನಗರದಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಅವರ ನೆರೆಮನೆಯ ವೇಣು, ಸುರೇಶ್ ಮತ್ತು ಸುಜಿತ್ ಎಂಬವರು ಚಂದ್ರರವರನ್ನು ತಡೆದು ಹಳೆಯ ವೈಷಮ್ಯದಿಂದ ಅವರ ಮೇಲೆ ಹೆಲ್ಮೆಟ್‌ನಿಂದ ಹೊಡೆದು ಹಲ್ಲೆ ಮಾಡಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Thursday, October 19, 2017

ಅಕ್ರಮ ಗಾಂಜಾ ಬೆಳೆ ಪತ್ತೆ.
    ಕೊಡಗು ಜಿಲ್ಲೆಯ ಸೋಮವಾರಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕೂತಿ ಗ್ರಾಮದಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿರುವುದನ್ನು ಸೋಮವಾರಪೇಟೆ ಪೊಲೀಸರು ಪತ್ತೆ ಹಚ್ಚಿ ಪ್ರಕರಣ ದಾಖಲಿಸಿದ್ದಾರೆ.

     ಕೊಡಗು ಜಿಲ್ಲೆಯಾದ್ಯಂತ ಮಾದಕವಸ್ತು ಮಾರಾಟ ಜಾಲ ಹೆಚ್ಚುತ್ತಿದ್ದು, ಈ ಬಗ್ಗೆ ತಮ್ಮ ವ್ಯಾಪ್ತಿಯಲ್ಲಿ ಮಾಹಿತಿ ಸಂಗ್ರಹಿಸಿ ದಾಳಿ ನಡೆಸುವಂತೆ ಪೊಲಿಸ್ ಅಧೀಕ್ಷಕರು ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ನೀಡಿದ ಸಲಹೆ ಸೂಚನೆಯನ್ವಯ ಸೋಮವಾಪೇಟೆ ಪೊಲೀಸ್ ಠಾಣಾ ಪಿ.ಎಸ್.ಐ ರವರು ತಮ್ಮ ವ್ಯಾಪ್ತಿಯ ಕೂತಿ ಗ್ರಾಮದ ಜಿತೇಂದ್ರ ಎಂಬವರು ತಮ್ಮ ಮನೆಯ ಹಿಂದಿನ ತಮಗೆ ಸೇರಿದ ಕಾಫಿ ತೋಟದಲ್ಲಿ ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಕಾಫಿ ಗಿಡಗಳ ಮದ್ಯೆ ಗಾಂಜಾ ಗಿಡ ಬೆಳೆದಿರುವ ಬಗ್ಗೆ ಖಚಿತ ಮಾಹಿತಿಯನ್ನು ಕಲೆಹಾಕಿ ದಿನಾಂಕ 18-10-2017 ರಂದು ಮಧ್ಯಾಹ್ನ 1-30 ಗಂಟೆಗೆ ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿದ್ದು, ದಾಳಿಯ ವೇಳೆ ಸುಮಾರು 12 ಗಾಂಜಾ ಗಿಡಗಳನ್ನು ವಶಕ್ಕೆ ಪಡೆದಿದ್ದು, ಅವುಗಳ ಅಂದಾಜು ತೂಕ 7 ಕೆ.ಜಿ. 700 ಗ್ರಾಂ ಆಗಿದ್ದು, ಆರೋಪಿ ಜಿತೇಂದ್ರ ಹೆಚ್.ಆರ್. ತಂದೆ: ಹೆಚ್.ಡಿ. ರಾಜು, 54 ವರ್ಷ, ವ್ಯವಸಾಯ, ಕೂತಿ ಗ್ರಾಮ, ಸೋಮವಾರಪೇಟೆ ತಾಲೋಕು ಇವರನ್ನು ದಸ್ತಗಿರಿ ಮಾಡಿರುತ್ತಾರೆ.

    ಈ ಕಾರ್ಯಾಚರಣೆಯನ್ನು ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರವರಾದ ಶ್ರೀ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್., ಮಾರ್ಗದರ್ಶನದಲ್ಲಿ ಸೋಮವಾರಪೇಟೆ ಉಪ ವಿಭಾಗದ ಡಿವೈ.ಎಸ್.ಪಿ. ಶ್ರೀ ಸಂಪತ್ ಕುಮಾರ್ ರವರ ನೇತೃತ್ವದಲ್ಲಿ ಸೋಮವಾರಪೇಟೆ ಪಿ.ಎಸ್.ಐ. ಶಿವಣ್ಣ, ಸಿಬ್ಬಂದಿಗಳಾದ ಶಿವಕುಮಾರ್, ಕುಮಾರ, ರಮೇಶ, ಜಗದೀಶ, ಮಹೇಂದ್ರ, ಸಂದೇಶ ಮತ್ತು ಮಧು ರವರುಗಳು ನಡೆಸಿದ್ದು, ಈ ಪ್ರಕರಣವನ್ನು ಪತ್ತೆಹಚ್ಚಿದ ಅಧಿಕಾರಿ ಹಾಗು ಸಿಬ್ಬಂದಿಯವರ ಕಾರ್ಯವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

     ಕೊಡಗು ಜಿಲ್ಲೆಯಾದ್ಯಂತ ಗಾಂಜಾ ಮಾರಾಟ ಜಾಲ ಹಬ್ಬಿಕೊಂಡಿದ್ದು, ಯುವಕರು ಮಾದಕ ವಸ್ತುಗಳ ವ್ಯಸನಿಗಳಾಗುತ್ತಿದ್ದು, ಇದನ್ನು ತಡೆಯುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಿ ಯಾವುದೇ ಮಾದಕ ವಸ್ತುಗಳ ಬಗ್ಗೆ ಮಾಹಿತಿ ಇದ್ದಲ್ಲಿ ಸಾರ್ವಜನಿಕರು ತಮ್ಮ ಗ್ರಾಮದ ಬೀಟ್ ಅಧಿಕಾರಿಗಳಿಗಾಗಲೀ ಅಥವಾ ಸಂಬಂಧಪಟ್ಟ ಪೊಲೀಸ್ ಠಾಣೆಯ ಠಾಣಾಧಿಕಾರಿಗಳಿಗಾಗಲೀ ನೀಡುವಂತೆ ಕೋರಲಾಗಿದೆ. ಇದಲ್ಲದೇ ಕೊಡಗು ಜಿಲ್ಲೆಯಾದ್ಯಂತ ಸುಮಾರು 30 ಕಡೆಗಳಲ್ಲಿ ಸಲಹಾ ಪೆಟ್ಟಿಗಳನ್ನು ಇರಿಸಿದ್ದು ಯಾವುದೇ ಅಕ್ರಮ ಚಟುವಟಿಕೆಗಳ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರು ನೀಡಬಹುದಾಗಿರುತ್ತದೆ. ಮಾಹಿತಿ ನೀಡಿದ ಸಾರ್ವಜನಿಕರು ತಮ್ಮ ಹೆಸರು ನಮೂದಿಸುವ ಅಗತ್ಯವಿರುವುದಿಲ್ಲ. ಹೆಸರು ನಮೂದಿಸಿ ಮಾಹಿತಿ ನೀಡಿದ ಸಾರ್ವಜನಿಕರ ವಿವರವನ್ನು ಗೌಪ್ಯವಾಗಿಡಲಾಗುವುದು ಹಾಗು ಸೂಕ್ತ ಬಹುಮಾನವನ್ನು ನೀಡಲಾಗುವುದೆಂದು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆರವರು ತಿಳಿಸಿರುತ್ತಾರೆ.
 

ಮಹಿಳೆ ಆಕಸ್ಮಿಕ ಸಾವು
                                    ದಿನಾಂಕ 17/10/2017ರಂದು ಶ್ರೀಮಂಗಲ ಬಳಿಯ ಹರಿಹರ ಗ್ರಾಮದ ನಿವಾಸಿ ಪಣಿಎರವರ ಚಿಮ್ಮಿ ಎಂಬ ಮಹಿಳೆಯು ತನ್ನ ಪತಿ ಶಂಕರನೊಂದಿಗೆ ಮುಕ್ಕಾಟಿರ ಪ್ರಭು ಎಂಬವರ ಕೆರೆಗೆ ಬಟ್ಟೆ ಒಗೆಯುವ ಸಲುವಾಗಿ ಹೋಗಿದ್ದು ಬಟ್ಟೆ ಒಗೆಯುವ ಸಂದರ್ಭದಲ್ಲಿ ಚಿಮ್ಮಿರವರು ಆಕಸ್ಮಿಕವಾಗಿ ಕಾಲು ಜಾರಿ ಕೆರೆಗೆ ಬಿದ್ದು ಸಾವಿಗೀಡಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                              ದಿನಾಂಕ 18/10/2017ರಂದು ಕುಶಾಲನಗರದ ನೇತಾಜಿ ಬಡಾವಣೆ ನಿವಾಸಿ ರಾಕೇಶ್  ಪಂಡಿತ್ ಎಂಬವರು ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಮನೆಯೊಳಗೆ ಮೇಲ್ಛಾವಣಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತ ರಾಕೇಶ್ ಪಂಡಿತ್ ಹಲವಾರು ವರ್ಷಗಳಿಂದ ಮಾನಸಿಕ ವ್ಯಸನದಿಂದ ಬಳಲುತ್ತಿದ್ದು ಈ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆಕಸ್ಮಿಕ ಸಾವು
                           ದಿನಾಂಕ 18/10/2017ರಂದು ಮಡಿಕೇರಿ ಬಳಿಯ ಕಾಟಕೇರಿ ನಿವಾಸಿ ನಾರಾಯಣ ಪೂಜಾರಿ ಎಂಬವರು ಜಿ.ನಾರಾಯಣ ರಾವ್ ಎಂಬವರ ಹೆರವನಾಡಿನಲ್ಲಿರುವ ತೋಟದಲ್ಲಿ ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಒಣಗಿದ ಮರಗಳನ್ನು ಕಡಿಯುವಾಗ ಮರದ ರೆಂಬೆಯು ತುಂಡಾಗಿ ನಾರಾಯಣ ಪೂಜಾರಿರವರ ಮೇಲೆ ಬಿದ್ದು ಅವರು ಮೃತರಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Wednesday, October 18, 2017

ಬೈಕಿಗೆ ಕಾರು ಡಿಕ್ಕಿ.

   ಕಾರೊಂದು ಬೈಕಿಗೆ ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಕುಶಾಲನಗರ ಸಮೀಪದ ಗುಡ್ಡೆಹೊಸೂರು ಗ್ರಾಮದಲ್ಲಿ ನಡೆದಿದೆ. ಆಂದ್ರಪ್ರದೇಶ, ವಿಜಯವಾಡ ಮೂಲದ ವ್ಯಕ್ತಿ ಸತ್ಯನಾರಾಯಣ ಎಂಬವರು ದಿನಾಂಕ 17-10-2017 ರಂದು ರಾತ್ರಿ 10-30 ಗಂಟೆ ಸಯಮದಲ್ಲಿ ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಕುಶಾಲನಗರ ಕಡೆಯಿಂದ ಸುಂಟಿಕೊಪ್ಪದ ಕಡೆಗೆ ಬರುತ್ತಿದ್ದಾಗ ಎದುರುಗಡೆಯಿಂದ ಬಂದ ಕಾರೊಂದು ಡಿಕ್ಕಿಯಾದ ಪರಿಣಾಮ ಸದರಿ ಬೈಕ್ ಸವಾರ ಗಾಯಗೊಂಡಿದ್ದು, ಈ ಸಂಬಂಧ ಅಪಘಾತ ಸ್ಥಳದಲ್ಲಿದ್ದ ವ್ಯಕ್ತಿ ಸೀಗೆಹೊಸೂರು ಗ್ರಾಮದ ನಿವಾಸಿ ತಿಲಕ್ ಎಂಬವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆಸ್ತಿ ವಿವಾದ:

      ಆಸ್ತಿ ವಿವಾದದ ಹಿನ್ನೆಲೆಯಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಜಗಳ ಏರ್ಪಟ್ಟು ಒಬ್ಬರು ತೋಟದ ಬೇಲಿ ಕಿತ್ತು ಹಾನಿಗೊಳಿಸಿದ ಘಟನೆ ವಿರಾಜಪೇಟೆ ಸಮೀಪದ ಕದನೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ಗ್ರಾಮಾಂತರ ಠಾಣಾ ವ್ಯಾಪ್ತಿಯ ಕದನೂರು ಗ್ರಾಮದ ನಿವಾಸಿ ಪೆಮ್ಮಂಡ ಸಿ. ದೇವಯ್ಯ ಮತ್ತು ಶಮ್ಮಿ ಮೊಣ್ಣಪ್ಪ ಎಂಬವರ ನಡುವೆ ಆಸ್ತಿ ವಿಚಾರದಲ್ಲಿ ಜಗಳವಿದ್ದು ದಿನಾಂಕ 14-10-2017 ರಂದು ಶಮ್ಮಿ ಮೊಣ್ಣಪ್ಪ ಹಾಗು ಜಗದೀಶ್ ರವರು ಸೇರಿ ಪೆಮ್ಮಂಡ ಸಿ. ದೇವಯ್ಯನವರಿಗೆ ಸೇರಿದ ತೋಟಕ್ಕೆ ಹಾಕಿದ ತಂತಿ ಬೇಲಿಯನ್ನು ಕಿತ್ತು ಹಾಕಿ ಹಾನಿಪಡಿಸಿರುವುದಾಗಿ ಹಾಗು ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಮನೆಗೆ ಬೆಂಕಿ:

      ಮನೆಯ ಒಳಗಡೆ ಬೆಂಕಿ ಹೊತ್ತಿಕೊಂಡು ಅಪಾರ ಪ್ರಮಾಣದ ಕಾಗದ ಪತ್ರ, ಚಿನ್ನಾಭರಣ ಮತ್ತು ಪೀಠೋಪಕರಣಗಳಿಗೆ ಹಾನಿಯಾಗಿರುವ ಘಟನೆ ಗೋಣಿಕೊಪ್ಪ ನಗರದಲ್ಲಿ ನಡೆದಿದೆ.   ಗೋಣಿಕೊಪ್ಪ ನಗರದ ುಮಾ ಮಹೇಶ್ವರಿ ಬಡಾವಣೆ, ಪಿ.ಎನ್.ಎಂ. ಆಸ್ಪತ್ರೆಯ ಹಿಂಭಾಗದಲ್ಲಿ ವಾಸವಾಗಿರುವ  ಡಾ|| ಎಂ.ಡಿ ಗೌರಮ್ಮ ಗಂಡ ಲೇಟ್ ಮೊಣ್ಣಪ್ಪ ಪ್ರಾಯ 76 ವರ್ಷ   ಇವರು ತಮ್ಮ ಮನೆಯಲ್ಲಿ ಇಲ್ಲದ ಸಮಯದಲ್ಲಿ ದಿನಾಂಕ 17/10/17 ರಂದು ಬೆಳಗಿನ ಜಾವ  ಅವರ ಮನೆಯ ಒಳಗಡೆ ಬೆಂಕಿ ಹತ್ತಿಕೊಂಡು ಮನೆಯ ಒಳಗಡೆ ಇದ್ದ, ಆಸ್ತಿಯ, ಬ್ಯಾಂಕಿನ ದಾಖಲೆ ಪತ್ರಗಳು ಮತ್ತು ಚಿನ್ನ ಮತ್ತು ಬೆಳ್ಳಿಯ ಆಭರಣಗಳು ಪಿಠೋಪಕರಣಗಳು ಮತ್ತು ಬಟ್ಟೆಗಳು  ಇತ್ಯಾದಿ ಬೆಂಕಿಯಿಂದ ಸುಟ್ಟು ಅಂದಾಜು 15-20 ಲಕ್ಷ ರೂ ನಷ್ಟ ಉಂಟಾಗಿರುವುದಾಗಿಯೂ ಈ ಕೃತ್ಯವನ್ನು ಯಾರೋ ದುಷ್ಕರ್ಮಿಗಳು ಮಾಡಿರಬಹುದೆಂದು ನೀಡಿರುವ ದೂರಿನ ಮೇರೆಗೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tuesday, October 17, 2017

ರಸ್ತೆ ಅಫಘಾತ
                         ದಿನಾಂಕ 15/10/17 ರಂದು ಕುಶಾಲನಗರ ಬಳಿಯ ಹೆಬ್ಬಾಲೆ ನಿವಾಸಿ ಗಣೇಶ್‌ ಮತ್ತು ಅವರ ಅಣ್ಣನ ಮಗ ಪುಟ್ಟಸ್ವಾಮಿಯವರು ಕುಶಾಲನಗರ ಸಂತೆಯಲ್ಲಿ ಸಂಜೆ ವ್ಯಾಪಾರ ಮುಗಿಸಿಕೊಂಡು ಅವರವರ ಬೈಕಿನಲ್ಲಿ ಹೆಬ್ಬಾಲೆ ಕಡೆ ಹೊರಟಿದ್ದು  ಕೂಡ್ಲೂರು ಶಾಲೆ ಹತ್ತಿರ, ಮುಂದೆ ಪುಟ್ಟಸ್ವಾಮಿಯವರು ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕೆಎ-12-ಎಲ್ - 4907 ಬೈಕ್ ಗೆ ಎದುರುಗಡೆಯಿಂದ ನೋಂದಣಿಯಾಗದ ಹೊಸ ಆಟೋವನ್ನು ಅದರ ಚಾಲಕ ರವಿ ಎಂಬಾತನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲನೆ ಮಾಡಿಕೋಂಡು ಬಂದು ಡಿಕ್ಕಿ ಪಡಿಸಿದ ಪರಿಣಾಮ ಪುಟ್ಟ ಸ್ವಾಮಿಯವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಮಹಿಳೆ ಆಕಸ್ಮಿಕ ಸಾವು
                       ದಿನಾಂಕ 26/09/2017ರಂದು  ನಾಪೋಕ್ಲು ಬಳಿಯ ಕಾರುಗುಂದ ಗ್ರಾಮದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸುಮ ಎಂಬವರು ಸಂಜೆ ಕೆಲಸದಿಂದ ಬಂದು ನೀರು ಕುಡಿಯುವ ಬದಲು ಅಲ್ಲೇ ಪಕ್ಕದಲ್ಲಿಟ್ಟಿದ್ದ ರೌಂಡಪ್ ಎಂಬ ಕಳೆನಾಶಕವನ್ನು ಕುಡಿದು ಅಸ್ವಸ್ಥಳಾಗಿದ್ದು ಆಕೆಯನ್ನು ಚಿಕಿತ್ಸೆಗಾಗಿ ಮೈಸೂರಿನ ಜೆ.ಎಸ್‌.ಎಸ್‌.ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸುಮರವರು ದಿನಾಂಕ 15/10/2017ರಂದು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕ್ ಅಫಘಾತ
                        ದಿನಾಂಕ 14/10/2017ರಂದು ಕೇರಳದ ಕಣ್ಣಾನೂರು ನಿವಾಸಿ ಮಹಮದ್ ರಾಫಿ ಹಾಗೂ ಅವರ ಸ್ನೇಹಿತ ನೌಫಲ್ ಎಂಬವರು ಕೆಎಲ್-13-ಎಸಿ-8818ರ ಮೋಟಾರು ಬೈಕಿನಲ್ಲಿ ಕಣ್ಣಾನೂರಿನಿಂದ ಕುಶಾಲನಗರಕ್ಕೆ ಬರುತ್ತಿರುವಾಗ ವಿರಾಜಪೇಟೆ ಬಳಿಯ ಐಮಂಗಲ ಗ್ರಾಮದ ಕೊಮ್ಮೆತೋಡು ಬಳಿ ನೌಫಲ್ ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಬೈಕ್ ರಸ್ತೆ ಬದಿಯ ಚರಂಡಿಗೆ ಮಗುಚಿಬಿದ್ದು ಹಿಂಬದಿ ಸವಾರ ಮಹಮದ್ ರಾಫಿಯವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ನಿರ್ಲಕ್ಷ್ಯತನದ ವಾಹನ ಚಾಲನೆ
                      ದಿನಾಂಕ 16/10/2017ರಂದಯ ಸುಂಟಿಕೊಪ್ಪ ಠಾಣೆಯ ಎಎಸ್‌ಐ ಬಿ.ಜಿ.ಗುಣಶೇಖರ್‌ರವರು ನಗರ ಗಸ್ತು ಕರ್ತವ್ಯದಲ್ಲಿರುವಾಗ ಕೇರಳದ ತಲಚೇರಿ ನಿವಾಸಿ ಎಂ.ಪಿ.ನಿಕೇಶ್ ಎಂಬವರು ಅವರ ಕೆಎಲ್‌-58-ಟಿ-4244ರ ಕಾರನ್ನು ಸಾರ್ವಜನಿಕರಿಗೆ ಮತ್ತು ಇತರ ವಾಹನಗಳಿಗೆ ತೊಂದರೆಯಾಗುವ ರೀತಿಯಲ್ಲಿ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. 

ಅಕ್ರಮ ಗಾಂಜಾ ವಶ
ದಿನಾಂಕ 16/10/2017ರಂದು ಸೋಮವಾರಪೇಟೆ ಠಾಣೆಯ ಪಿಎಸ್‌ಐ ಶಿವಣ್ಣರವರು ಗಸ್ತು ಕರ್ತವ್ಯದಲ್ಲಿರುವಾಗ ಹಾನಗಲ್ಲು ಬಾಣೆಯಿಂದ ಕಾನ್ವೆಂಟ್ ಬಾಣೆಗೆ ಹೋಗುವ ಜಂಕ್ಷನ್‌ನ ಬಳಿ ಹಾನಗಲ್ಲು ನಿವಾಸಿ ಯೋಗೇಶ್‌ ಎಂಬಾತನು ಸುಮಾರು ರೂ.1000/- ಬೆಲೆಯ ಗಾಂಜಾವನ್ನು ಅಕ್ರಮವಾಗಿ ಮಾರಾಟ ಮಾಡುವ ಸಲುವಾಗಿ ಇಟ್ಟುಕೊಂಡದ್ದನ್ನು ಪತ್ತೆ ಹಚ್ಚಿ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಂಡಿದ್ದಾರೆ.

Monday, October 16, 2017ಬೈಕ್‌ ಕಳವು ಆರೋಪಿಗಳ ಸೆರೆ.
                           ಮಡಿಕೇರಿ ನಗರದಲ್ಲಿ ಕಳೆದ 3-4 ತಿಂಗಳಿನಿಂದ ರಸ್ತೆ ಬದಿಯಲ್ಲಿ ಮತ್ತು ಮನೆಯ ಮುಂದೆ ನಿಲ್ಲಿಸಿದ್ದ ಮೋಟಾರು ಸೈಕಲ್‌ಗಳ ಕಳ್ಳತನ ಮಾಡುತ್ತಿದ್ದ ಕೇರಳ ಮೂಲದ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ಮಡಿಕೇರಿ ನಗರ ಪೊಲೀಸ್ ಠಾಣಾ ಉಪ ನಿರೀಕ್ಷಕರು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

                           ದಿನಾಂಕ 10/07/2017 ರಂದು ಮಡಿಕೇರಿ ನಗರದ ಅಮಿತ್‌ಕುಮಾರ್ ರವರ ಕೆಎ-12-ಎಲ್-3006 ರ ಯಮಹಾ ಎಫ್‌ಝೆಡ್ ಮೋಟಾರು ಸೈಕಲ್, ದಿನಾಂಕ 16/08/2017 ರಂದು ನಗರದ ಎಂ.ಹೆಚ್.ಮುಸ್ತಾಫ ಎಂಬವರಿಗೆ ಸೇರಿದ ಕೆಎ-12-ಕ್ಯೂ-3515 ರ ರಾಯಲ್ ಎನ್ಫೀಲ್ಡ್ ಮೋಟಾರು ಬೈಕ್ ಮತ್ತು ಎಂ.ನಾಗರಾಜ್ ಉಪಾದ್ಯರವರ ಕೆಎ-34-ಇಎ-5942 ರ ಬಜಾಜ್ ಪಲ್ಸರ್ ಮೋಟಾರು ಬೈಕ್ ಕಳ್ಳತನವಾದ ಬಗ್ಗೆ ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ನಗರ ಠಾಣೆಯ ಪಿಎಸ್ಐ ಮತ್ತು ಅಪರಾಧ ವಿಭಾಗದ ಸಿಬ್ಬಂದಿ ಆರೋಪಿಗಳ ಪತ್ತೆಯ ಬಗ್ಗೆ ತನಿಖೆ ಕೈಗೊಂಡಿದ್ದರು. 
ಬಂಧಿತ ಆರೋಪಿಗಳೊಂದಿಗೆ ತನಿಖಾ ತಂಡ


                        ಪ್ರಕರಣದ ತನಿಖೆಯ ಸಮಯದಲ್ಲಿ ದಿನಾಂಕ 15/10/2017 ರಂದು ಮಡಿಕೇರಿ ನಗರದ ರಾಜಾಸೀಟ್ ಬಳಿ ಕೆಎಲ್-14-ಕ್ಯೂ-3073 ಸಂಖ್ಯೆಯ ಒಂದು ಮಾರುತಿ ಆಲ್ಟೋ 800 ಕಾರಿನಲ್ಲಿ ಸಂಶಯಾಸ್ಪದ ರೀತಿಯಲ್ಲಿ ಸುತ್ತಾಡುತ್ತಿದ್ದ ಮೂವರು ವ್ಯಕ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಅವರು ಕೇರಳದ ಕಾಸರಗೋಡುವಿನಿಂದ ರಾತ್ರಿ ಸಮಯದಲ್ಲಿ ಕಾರಿನಲ್ಲಿ ಮಡಿಕೇರಿಗೆ ಬಂದು ಮೋಟಾರು ಸೈಕಲ್‌ಗಳನ್ನು ಕಳವು ಮಾಡಿಕೊಂಡು ಕೇರಳ ರಾಜ್ಯಕ್ಕೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿರುವುದು ತಿಳಿದು ಬಂದಿರುತ್ತದೆ. ನಂತರ ಈ ವ್ಯಕ್ತಿಗಳಿಂದ ಕಳವು ಮಾಡಲು ಉಪಯೋಗಿಸಿದ ಕೆ.ಎಲ್-14-ಕ್ಯೂ-3073 ಮಾರುತಿ ಆಲ್ಟೋ 800 ಕಾರನ್ನು ವಶಪಡಿಸಿಕೊಂಡು ನಗರ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಕೇರಳ ರಾಜ್ಯಕ್ಕೆ ತೆರಳಿ ಆರೋಪಿಗಳು ಕಳವು ಮಾಡಿರುವ ಮೂರು ಮೋಟಾರು ಸೈಕಲ್‌ಗಳನ್ನು ವಶಪಡಿಸಿಕೊಂಡು ಬಂದಿರುತ್ತಾರೆ.

                          ಪ್ರಕರಣಕ್ಕೆ ಸಂಬಂಧಿಸಿದಂತೆ ಕೇರಳ ರಾಜ್ಯದ ಕಾಸರಗೋಡಿನ ಚಟ್ಟಂಚಾಲ ಗ್ರಾಮದ ಅತೀಫ್‌ ಅಲಿಯಾಸ್ ಅತೀ, ಚೆರ್ಕಳ ಗ್ರಾಮದ ಇಜಾಜ್ ಪಿ.ಎಸ್. ಹಾಗೂ ಕಾಸರಗೋಡಿನ ಚೆಟ್ಟಂಚಾಲ ಗ್ರಾಮದ ನಿವಾಸಿ ಪ್ರಸ್ತುತ ಕುಶಾಲನಗರದ ನಿಸರ್ಗಧಾಮದ ಬಳಿ ಸಲೀಂ ಎಂಬವರ ಸ್ಪೈಸಸ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡು 7ನೇ ಹೊಸಕೋಟೆಯಲ್ಲಿ ವಾಸವಿರುವ ಎಂ.ಎಸ್. ಮಹಮದ್ ಫಾಯಿಜ್ ಅಲಿಯಾಸ್ ಪಚ್ಚು ಎಂಬವರನ್ನು ಮಡಿಕೇರಿ ನಗರ ಪೊಲೀಸರು ಬಂಧಿಸಿದ್ದಾರೆ.

                          ಜಿಲ್ಲಾ ಪೊಲೀಸ್ ಉನ್ನತಾಧಿಕಾರಿ ಪಿ.ರಾಜೇಂದ್ರ ಪ್ರಸಾದ್ ಐ.ಪಿ.ಎಸ್ ರವರ ನಿರ್ದೇಶನದಲ್ಲಿ ಮಡಿಕೇರಿ ಉಪ ವಿಭಾಗದ ಡಿವೈಎಸ್‌ಪಿ ಕೆ.ಎಸ್.ಸುಂದರ್ ರಾಜ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕ ಐ.ಪಿ.ಮೇದಪ್ಪರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮಡಿಕೇರಿ ನಗರ ಠಾಣೆಯ ಪಿ.ಎಸ್.ಐ. ಹೆಚ್.ವೈ. ವೆಂಕಟರಮಣ, ಎಎಸ್ಐಗಳಾದ ಕೆ.ಓ.ರಮೇಶ್, ಎಸ್.ಎಸ್. ಶ್ರೀನಿವಾಸ ಮತ್ತು ಸಿಬ್ಬಂದಿಗಳಾದ ಕೆ.ಕೆ.ದಿನೇಶ್, ಎ.ಟಿ.ರಾಘವೇಂದ್ರ, ಕೆ.ಎ.ಉತ್ತಪ್ಪ, ಎಂ.ಆರ್.ಸತೀಶ್, ಕೆ.ಜಿ.ಮಧುಸೂಧನ್, ಬಿ.ಡಿ.ಮುರಳಿ, ಮನೋಜ್ ಕೆ.ಬಿ., ಬಿ.ಕೆ.ಪ್ರವೀಣ್, ಗಿರೀಶ್ ಎಂ,ಎ ಮತ್ತು ಸಿ.ಕೆ.ರಾಜೇಶ್‌ರವರು ಪಾಲ್ಗೊಂಡಿದ್ದು ತನಿಖಾ ತಂಡದ ಕಾರ್ಯವೈಖರಿಯನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್, ಐಪಿಎಸ್‌ರವರು ಶ್ಲಾಘಿಸಿರುತ್ತಾರೆ. 

ಲಾರಿ ಅವಘಢ
                           ದಿನಾಂಕ 14/10/2017ರಂದು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಅರಕೆರೆ ನಿವಾಸಿ ಮನು ಎಂ.ಎ. ಎಂಬವರು ಕೆಎ-14-ಎ-3914 ಲಾರಿಯಲ್ಲಿ ಚಾಲಕ ಮಹದೇವ ಎಂಬವರೊಂದಿಗೆ ಲಾರಿಯಲ್ಲಿ ಪ್ಲೈವುಡ್ ತ್ಯಾಜ್ಯವನ್ನು ತುಂಬಿಕೊಂಡು ಮಂಗಳೂರಿಗೆ ಹೋಗುತ್ತಿರುವಾಗ ಮದೆನಾಡು ಗ್ರಾಮದ ಬಳಿ ಚಾಲಕ ಮಹದೇವರವರು ಲಾರಿಯನ್ನು ಟತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಲಾರಿ ಚಾಲಕ ಮಹದೇವರವರ ನಿಯಂತ್ರಣ ಕಳೆದುಕೊಂಡು ರಸ್ತೆ ಪಕ್ಕದ ತೋಟಕ್ಕೆ ಉರುಳಿಬಿದ್ದ ಪರಿಣಾಮ ಲಾರಿ ಹಾನಿಗೊಳಗಾಗಿ ಮಹದೇವ ಹಾಗೂ ಮನುರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಕಾರು ಅಫಘಾತ
                           ದಿನಾಂಕ 14/10/2017ರಂದು ಆಂಧ್ರಪ್ರದೇಶದ ಗುಂಟೂರು ನಿವಾಸಿ ವೆಂಕಟೇಶವರಲ ಎಂಬವರು ಅವರ ಮಗನೊಂದಿಗೆ ಆಶ್ಲೇಷ ಎಂಬವರ ಕೆಎ-51-ಎಎ-7424ರ ಕಾರಿನಲ್ಲಿ ಸೋಮವಾರಪೇಟೆಗೆ ಬರುತ್ತಿರುವಾಗ ಬೆಳ್ಳಾರಳ್ಳಿ ಗ್ರಾಮದ ಬಳಿ ಚಾಲಕ ಆಶ್ಲೇಷರವರು ಕಾರನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ಕಾರು ರಸ್ತೆಯ ಬದಿಯ ಚರಂಡಿಗೆ ಮಗುಚಿಕೊಂಡು ಹಾನಿಗೊಳಗಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಲಾರಿ ಡಿಕ್ಕಿ
                          ದಿನಾಂಕ 15/10/2017ರಂದು ಕುಶಾಲನಗರದ ಮುಳ್ಳುಸೋಗೆ ನಿವಾಸಿ ಮುಸ್ತಫಾ ಎಂಬವರು ಅವರ  ಬೈಕಿನಲ್ಲಿ ಕುಶಾಲನಗರದ ಬೈಚನಹಳ್ಳಿ ಬಳಿ ಹೋಗುತ್ತಿರುವಾಗ ಬ್ಲೂಮೂನ್ ಪೆಟ್ರೋಲ್‌ ಬಂಕಿನಿಂದ ಕೆಎ-18-ಎ-0022ರ ಲಾರಿಯನ್ನು ಅದರ ಚಾಲಕ ನಿರ್ಲಕ್ಷ್ಯತನದಿಂದ ಚಾಲಿಸಿಕೊಂಡು ಬಂದು ಏಕಾ ಏಕಿ ಮುಖ್ಯ ರಸ್ತೆಗೆ ತಿರುಗಿಸಿದ ಪರಿಣಾಮ ಕುಶಾಲನಗರ ಕಡೆಯಿಂದ ಬರುತ್ತಿದ್ದ ಒಂದು ಹೊಸ ಬೈಕಿಗೆ ಡಿಕ್ಕಿಯಾಗಿ ಬೈಕಿನ ಸವಾರ ರಿಯಾಜ್ ಎಂಬವರಿಗೆ ತೀವ್ರ ಗಾಯಗಳಾಗಿದ್ದು ಮುಸ್ತಫಾ ಹಾಗೂ ಇನ್ನಿತರರು ಗಾಯಾಳು ರಿಯಾಜ್‌ನನ್ನು ಆಸ್ಪತ್ರೆಗೆ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Sunday, October 15, 2017

ರಸ್ತೆ ಅಫಘಾತ
                             ದಿನಾಂಕ 14/10/2017ರಂದು ನಾಪೋಕ್ಲು ಬಳಿಯ ನೆಲಜಿ ಗ್ರಾಮದ ನಿವಾಸಿ ಮೋಹನ್ ಎಂಬವರು ತೋಟ ಕೆಲಸಕ್ಕೆ ಹೋಗಿ ಮರಳಿ ಬರುತ್ತಿರುವಾಗ ಎಮ್ಮಮಾಡು ಜಂಕ್ಷನ್ ಬಳಿ ಅವರ ನೆರೆ ಮನೆಯ ಎಂ.ಪಿ.ಮುದ್ದಪ್ಪ ಎಂಬವರು ರಸ್ತೆಯಲ್ಲಿ ಗಾಯಗಳಾಗಿ ಬಿದ್ದಿದ್ದು ಅವರನ್ನು ವಿಚಾರಿಸಿದಾಗ ಯಾವುದೋ ಒಂದು ವಾಹನವು ಅವರಿಗೆ ಡಿಕ್ಕಿಪಡಿಸಿ ಹೊರಟು ಹೋಗಿರುವುದಾಗಿ ತಿಳಿಸಿದ್ದು ನಂತರ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಿ ದಾಖಲಿಸಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ಕಾರು ಡಿಕ್ಕಿ
                            ದಿನಾಂಕ 12/10/2017ರಂದು ಕುಶಾಲನಗರದ ರಥಬೀದಿ ನಿವಾಸಿ ಪರಮೇಶ್‌ ಎಂಬವರ ತಮ್ಮ ಗಣೇಶ್ ಎಂಬವರು ನಗರದ ಆಂಜನೇಯ ದೇವಸ್ಥಾನದ ಕಡೆಯಿಂದ ಅವರ ಮೋಟಾರು ಬೈಕ್ ಸಂಖ್ಯೆ ಕೆಎ-12-ಎಲ್-8058ರಲ್ಲಿ ರಥಬೀದಿ ಕಡೆಗೆ ಹೋಗುತ್ತಿರುವಾಗ ಕಾರ್ಯಪ್ಪ ವೃತ್ತದ ಕಡೆಯಿಂದ ಕೆಎ-04-ಎಂಎ-3356ರ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಗಣೇಶ್‌ರವರು ಚಾಲಿಸುತ್ತಿದ್ದ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಗಣೇಶ್‌ರವರಿಗೆ ಗಾಯಗಳಾಗಿದ್ದು ಕಾರಿನ ಚಾಲಕ ಅಫಘಾತದ ನಂತರ ಕಾರನ್ನು ನಿಲ್ಲಿಸದೆ ಹೊರಟು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ  ಕೈಗೊಂಡಿದ್ದಾರೆ. 

ಮಹಿಳೆ ಆತ್ಮಹತ್ಯೆ
                       ದಿನಾಂಕ 14/10/2017ರಂದು ಸೋಮವಾರಪೇಟೆ ನಗರದ ಎಂ.ಡಿ.ಬ್ಲಾಕ್ ನಿವಾಸಿ ಬಿ.ಸಿ.ಯೋಗೇಶ್‌ ಎಂಬವರು ಸಂಬಂಧಿಕರ ಮದುವೆ ಸಮಾರಂಭಕ್ಕೆ ಎರಪಾರೆ ಗ್ರಾಮಕ್ಕೆ ಹೋಗಿದ್ದಾಗ ಅವರ ತಾಯಿ 63 ವರ್ಷ ಪ್ರಾಯದ ಸರೋಜಮ್ಮ ಎಂಬಾಕೆಯು ಮನೆಯ ಅಡುಗೆ ಕೋಣೆಯ ಮಾಡಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ನೆರೆಮನೆಯವರು ಯೋಗೇಶರವರಿಗೆ ದೂರವಾಣಿ ಮೂಲಕ ತಿಳಿಸಿದ್ದು ಮೃತೆ ಸರೋಜಮ್ಮರವರು ಆಗಾಗ್ಗೆ ಎದೆ ನೋವಿನಿಂದ ಬಳಲುತ್ತಿದ್ದು ಆ ಕಾರಣಕ್ಕೆ ಜುಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದಾಗಿ ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಬೈಕಿಗೆ ರಿಕ್ಷಾ ಡಿಕ್ಕಿ
                       ದಿನಾಂಕ 13/10/2017ರಂದು ಕೊಡ್ಲಿಪೇಟೆ ಬಳಿಯ ಕಟ್ಟೇಪುರ ನಿವಾಸಿ ಷಣ್ಮುಖ ಎಂಬವರು ಅವರ ಸ್ನೇಹಿತ ಯತೀಶ್‌ ಎಂಬವರೊಂದಿಗೆ ಹ್ಯಾಂಡ್‌ ಪೋಸ್ಟ್‌ನಿಂದ ಮದುವೆ ಸಮಾರಂಭ ಮುಗಿಸಿಕೊಂಡು ಕೆಎ-12-ಕೆ-4733ರ ಮೋಟಾರು ಬೈಕಿನಲ್ಲಿ ಬರುತ್ತಿರುವಾಗ ಬಸವನಾರೆ ಗ್ರಾಮದ ಬಳಿ ಎದುರಿನಿಂದ ಕೆಎ-12-ಎ-96778ರ ರಿಕ್ಷಾವನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಷಣ್ಮುಖರವರ ಬೈಕಿಗೆ ಡಿಕ್ಕಿಪಡಿಸಿದ ಪರಿಣಾಮ ಷಣ್ಮುಖರವರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಾನಿಗೆ ಕಾರು ಡಿಕ್ಕಿ
                    ದಿನಾಂಕ 14/10/2017ರಂದು ಮಂಡ್ಯ ಜಿಲ್ಲೆಯ ಪಾಂಡವಪುರ ನಿವಾಸಿ ರಾಜೇಂದ್ರ ಎಂಬವರು ಅವರ ಕೆಎ-03-ಎಸಿ-6879ರ ಟೆಂಪೋ ಟ್ರಾವೆಲರ್ ವ್ಯಾನಿನಲ್ಲಿ ಮಧ್ಯ ಪ್ರದೇಶದ ಪ್ರವಾಸಿಗರನ್ನು ಕರೆದುಕೊಂಡು ಮಡಿಕೇರಿಗೆ ಬಂದು ಮರಳಿ ಹೋಗುತ್ತಿರುವಾಗ ಸುಂಟಿಕೊಪ್ಪ ಬಳಿಯ ಕೆದಕಲ್ ಬಳಿ ಎದುರುಗಡೆಯಿಂದ ಕೆಎ-01-ಸಿ-8484ರ ಇನ್ನೋವಾ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ರಾಜೇಂದ್ರರವರ ವ್ಯಾನಿಗೆ ಡಿಕ್ಕಿಪಡಿಸಿದ ಪರಿಣಾಮ ವ್ಯಾನು ರಸ್ತೆಯಲ್ಲಿ ಮಗುಚಿ ಬಿದ್ದು ವ್ಯಾನಿನಲ್ಲಿದ್ದ ಮೂವರು ಪ್ರಯಾಣಿಕರಿಗೆ ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ ; ಸಾವು
                      ದಿನಾಂಕ 14/10/2017ರಂದು ಶ್ರೀಮಂಗಲ ಬಳಿಯ ತಾವಳಗೇರಿ ನಿವಾಸಿ ಪೂವಯ್ಯ ಎಂಬವರು ಹರಿಹರ ಗ್ರಾಮದಿಂದ ಒಂಟಿಯಂಗಡಿ ಜಂಕ್ಷನ್ ಕಡೆಗೆ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ ಹರಿಹರ ಗ್ರಾಮದ ಕಡೆಯಿಂದ ತೀತಿರ ನಿತಿನ್ ನಾಣಯ್ಯ ಎಂಬವರು ಕೆ-12-4108ರ ಮೋಟಾರು ಬೈಕನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಹಿಂಬದಿಯಿಂದ ಪೂವಯ್ಯನವರಿಗೆ ಡಿಕ್ಕಿಪಡಿಸಿದ ಪರಿಣಾಮ ಗಂಭೀರವಾಗಿ ಗಾಯಗೊಂಡ ಪೂವಯ್ಯನವರನ್ನು ಸೌಮ್ಯ ಎಂಬವರು ಶ್ರೀಮಂಗಲ ಆಸ್ಪತ್ರೆಗೆ ದಾಖಲಿಸಿದ್ದು ಸಂಜೆ ವೇಳೆ ಪೂವಯ್ಯನವರು ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ವ್ಯಕ್ತಿ ಆತ್ಮಹತ್ಯೆ
                      ದಿನಾಂಕ 12/10/2017ರಂದು ಕುಶಾಲನಗರ ಬಳಿಯ ಕೂಡಿಗೆ ಹೆಗ್ಗಡಹಳ್ಳಿ ನಿವಾಸಿ ಅಂಜನಿ ಗೌಡ ಎಂಬವರು ರಾತ್ರಿ ವೇಳೆ ಮನೆಯಲ್ಲಿ ಕುತ್ತಿಗೆಯನ್ನು ಯಾವುದೋ ಹರಿತವಾದ ವಸ್ತುವಿನಿಂದ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದು ತೀವ್ರವಾಗಿ ಗಾಯಗೊಂಡ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಗಾಯಾಳು ಅಂಜನಿಗೌಡರು ದಿನಾಂಕ 14/10/2017ರಂದು ಆಸ್ಪತ್ರೆಯಲ್ಲಿ ಮೃತರಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Saturday, October 14, 2017

ಕಾರಿಗೆ ಲಾರಿ ಡಿಕ್ಕಿ 
                              ದಿನಾಂಕ 13/10/2017ರಂದು ನಾಪೋಕ್ಲು ಬಳಿಯ ಎಮ್ಮೆಮಾಡು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕಿ ವಂಜಮ್ಮ ಎಂಬವರು ಮಾದಾಪುರದಲ್ಲಿ ನಡೆಯುತ್ತಿದ್ದ ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಅವರ ಶಾಲೆಯ ಸುಮಾರು 9 ಜನ ವಿದ್ಯಾರ್ಥಿಗಳನ್ನು ಕರೆದುಕೊಂಡು ಕೆಎ-53-ಎನ್-2255ರ ಇನ್ನೋವಾ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ನಾಪೋಕ್ಲು ಬಳಿಯ ಚೋನಕೆರೆ ಎಂಬಲ್ಲಿ ಎದುರುಗಡೆಯಿಂದ ಕೆ-12-ಎ-3029ರ ಸ್ವರಾಜ್ ಮಜ್ದಾ ಲಾರಿಯನ್ನು ಅದರ ಚಾಲಕ ವೆಂಕಟೇಶ್‌ ಎಂಬವರು ಲಾರಿಯನ್ನು ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ವಂಜಮ್ಮ ಮತ್ತು  ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಕಾರಿಗೆ ಡಿಕ್ಕಿಪಡಿಸಿದ ಪರಿಣಾಮ ಕಾರಿನಲ್ಲಿದ್ದ ಸುಮಾರು 7 ಜನ ವಿದ್ಯಾರ್ಥಿಗಳಿಗೆ  ಗಾಯಗಳಾಗಿರುವುದಾಗಿ ನೀಡಿದ ದೂರಿನ ಮೇರೆಗೆ ನಾಪೋಕ್ಲು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ರಸ್ತೆ ಅಫಘಾತ ;ಇಬ್ಬರ ಸಾವು
ದಿನಾಂಕ 13/10/2017ರಂದು ಪಾರಾಣೆ ನಿವಾಸಿ ದೇವಿ ಪ್ರಸಾದ್‌ ಎಂಬವರು ಅವರ ಕಾರಿನಲ್ಲಿ ಮಡಿಕೇರಿಗೆ ಹೋಗುತ್ತಿರುವಾಗ ಮಡಿಕೇರಿ ಸಮೀಪ ಕಗ್ಗೋಡ್ಲು ಬಳಿ ಕೆಎ-12-ಕ್ಯು-7329ರ ಸ್ಕೂಟರ್ ಹಾಗೂ ಕೆಎ-16-ಎನ್-1700ರ ಕಾರು ಪರಸ್ಪರ ಡಿಕ್ಕಿಯಾಗಿರುವುದು ಕಂಡು ಬಂದಿದ್ದು ಸ್ಕೂಟರ್ ಚಾಲಕ ನರಿಯಂದಡ ಗ್ರಾಮದ ಪೊಕ್ಕುಳಂಡ್ರ ಕಿವಿನ್‌ ಎಂಬವರು ಸ್ಥಳದಲ್ಲೇ ಸಾವಿಗೀಡಾಗಿದ್ದು ಸ್ಕೂಟರಿನ ಹಿಂಬದಿ ಸವಾರ ಚೇರಂಬಾಣೆ ನಿವಾಸಿ ಕೇಕಡ ಚರಣ್ ಎಂಬವರು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತರಾಗಿರುವುದಾಗಿ  ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

ಹೊಳೆಗೆ ಬಿದ್ದು ವ್ಯಕ್ತಿ ಸಾವು
                           ದಿನಾಂಕ 13/10/2017ರಂದು ಸುಂಟಿಕೊಪ್ಪ ಬಳಿಯ ಹೇರೂರು ಕಾಲೋನಿ ನಿವಾಸಿ ಮುತ್ತುರಾಜ ಯಾನೆ ಕೂಸು ಎಂಬವರು ಹಾರಂಗಿ ಹೊಳೆಯ ಹಿನ್ನೀರಿನಲ್ಲಿ ಆಕಸ್ಮಿಕವಾಗಿ ಬಿದ್ದು ಮೃತರಾಗಿರುವುದಾಗಿ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸಂಬಂಧಿಸಿದಂತೆ ದಿನಾಂಕ 09/10/2017ರಂದು ಮುತ್ತುರಾಜ ಯಾನೆ ಕೂಸು ಎಂಬವರು ಮನೆಯಲ್ಲಿ ಮದ್ಯಪಾನ ಮಾಡಲೆಂದು ತಾಯಿ ಕಾಳಿಯನ್ನು ಹಣ ಕೇಳಿದ್ದು ತಾಯಿ ಹಣವಿಲ್ಲವೆಂದು ಹೇಳಿದ ಕಾರಣಕ್ಕೆ ಮುತ್ತುರಾಜುರವರು ಮದ್ಯಪಾನ ಮಾಡಬೇಕೆಂದು ಹೇಳಿ ರಾತ್ರಿ ವೇಳೆ ಮನೆಯಿಂದ ಹೊರಟು ಹೋಗಿದ್ದು ಮನೆಗೆ ವಾಪಾಸು ಮರಳಿ ಬಾರದ ಕಾರಣ ದಿನಾಂಕ 11/10/2017ರಂದು ಸುಂಟಿಕೊಪ್ಪ ಠಾಣೆಯಲ್ಲಿ ಮನುಷ್ಯ ಕಾಣೆ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ದಿನಾಂಕ 09/10/2017ರ ರಾತ್ರಿ ವೇಳೆ ಮದ್ಯ ಪಾನ ಮಾಡಲೆಂದು ಮನೆಯಿಂದ ಹೊರಟ ಮುತ್ತುರಾಜರವರು ಆಕಸ್ಮಿಕವಾಗಿ ಕಾಲು ಜಾರಿ ಹಾರಂಗಿ ನದಿಯ ಹಿನ್ನೀರಿಗೆ ಬಿದ್ದು ಮೃತರಾಗಿರಬಹುದಾಗಿ ದೂರು ನೀಡಿದ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ಕಾರು ಅಫಘಾತ
                            ದಿನಾಂಕ 13/10/2017ರಂದು ಗೋಣಿಕೊಪ್ಪ ಬಳಿಯ ಅರ್ವತೊಕ್ಲು ನಿವಾಸಿ ಎಂ.ಎನ್.ಸೋಮಣ್ಣ ಎಂಬವರು ಅವರ ಕಾರು ಸಂಖ್ಯೆ ಕೆಎ-12-ಝೆಡ್-8732 ರಲ್ಲಿ ಗೋಣಿಕೊಪ್ಪದಿಂದ ಅರ್ವತೊಕ್ಲುವಿಗೆ ಹೋಗುತ್ತಿರುವಾಗ ಪೊನ್ನಂಪೇಟೆ ರಸ್ತೆಯ ರಿಲಾಯನ್ಸ್ ಪೆಟ್ರೋಲ್ ಬಂಕ್ ಬಳಿ ಹಿಂದಿನಿಂದ ಒಂದು ಸ್ವಿಫ್ಟ್ ಕಾರನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿಕೊಂಡು ಬಂದು ಸೋಮಣ್ಣರವರ ಕಾರಿಗೆ ಹಿಂದಿನಿಂದ ಡಿಕ್ಕಿಪಡಿಸಿ ನಿಲ್ಲಿಸದೇ ಹೊರಟು ಹೋಗಿದ್ದು ಸೋಮಣ್ಣನವರ ಕಾರು ಡಿಕ್ಕಿಯ ಪರಿಣಾಮ ಮುಂದಕ್ಕೆ ಚಲಿಸಿ ಮುಂದೆ ನಿಲ್ಲಿಸಿದ್ದ ಕಾರಿಗೆ ಡಿಕ್ಕಿಯಾಗಿ ಎರಡೂ ಕಾರಿಗೆ ಹಾನಿಯುಂಟಾಗಿರುವುದಾಗಿ ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

Friday, October 13, 2017


ಕಳವು ಆರೋಪಿಗಳ ಬಂಧನ
                         ಮಡಿಕೇರಿ, ವಿರಾಜಪೇಟೆ ಹಾಗೂ ಗೋಣಿಕೊಪ್ಪ ನಗರದಲ್ಲಿ ಇತ್ತೀಚೆಗೆ ಮೂರು ತಿಂಗಳಿನಿಂದ ಮನೆಯ ಬಾಗಿಲು ಒಡೆದು ಕಳವು ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲೆಯ ಅಪರಾಧ ಪತ್ತೆ ದಳದ ತಂಡದ ಸಿಬ್ಬಂದಿ ಯಶಸ್ವಿಯಾಗಿದ್ದಾರೆ.
ಪ್ರಕರಣದ ಮಾಹಿತಿ ನೀಡುತ್ತಿರುವ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳು
                                                                                                                                                                            ದಿನಾಂಕ 16-07-2017 ರಂದು ಗೋಣಿಕೊಪ್ಪ ನಗರದ ಮುಖ್ಯ ರಸ್ತೆಯಲ್ಲಿರುವ ಪುಷ್ಪಾವತಿ ಎಂಬವರ ಮನೆಯಿಂದ ಸುಮಾರು 164 ಗ್ರಾಂ ಚಿನ್ನ ಹಾಗೂ 15 ಸಾವಿರ ನಗದು ಹಣವನ್ನು ಕಳವು ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಣಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಗೋಣಿಕೊಪ್ಪ ವೃತ್ತ ನಿರೀಕ್ಷಕರವರು ತನಿಖೆ ನಡೆಸುತ್ತಿದ್ದರು. ಈ ಪ್ರಕರಣವಾಗಿ ಸುಮಾರು 12 ದಿನಗಳ ನಂತರ ದಿನಾಂಕ 28-07-2017 ರಂದು ಮಡಿಕೇರಿ ನಗರದ ಜಯನಗರದ ನಿವಾಸಿಯಾದ ಕಾರ್ಯಪ್ಪ ಎಂಬವರ ಮನೆಯ ಬಾಗಿಲು ಮುರಿದು ಒಳ ಪ್ರವೇಶಿಸಿದ ಕಳ್ಳರು ಸುಮಾರು 256 ಗ್ರಾಂ ಚಿನ್ನ ಹಾಗೂ 5 ಸಾವಿರ ನಗದು ಹಣ ಹಾಗೂ ಒಂದು .22 ರಿವಾಲ್ವರ್ ಹಾಗೂ ಮೂರು ಸಜೀವ ಗುಂಡುಗಳನ್ನು ಕಳವು ಮಾಡಿ ಪರಾರಿಯಾಗಿದ್ದರು. ಸದರಿ ರಿವಾಲ್ವರನ್ನು ಬಳಸಿ ಆರೋಪಿಗಳು ಇನ್ನಷ್ಟು ಕೃತ್ಯಗಳನ್ನು ಎಸಗುವ ಸಾಧ್ಯತೆಯಿದ್ದ ಕಾರಣ ಪ್ರಕರಣವನ್ನು ಪತ್ತೆ ಮಾಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ರಾಜೇಂದ್ರ ಪ್ರಸಾದ್‌, ಐಪಿಎಸ್‌ ರವರು ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್ ಹಾಗೂ ಮಡಿಕೇರಿ ನಗರ ವೃತ್ತ ನಿರೀಕ್ಷಕರಾದ ಐ.ಪಿ.ಮೇದಪ್ಪರವರ ನೇತೃತ್ವದಲ್ಲಿ ಎರಡು ಪ್ರತ್ಯೇಕ ತಂಡಗಳನ್ನು ರಚಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದರು. 

                       ಕಳವು ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಎರಡೂ ತಂಡಗಳು ಕಾರ್ಯ ನಿರತವಾಗಿರುವಾಗಲೇ ದಿನಾಂಕ 28-09-2017 ರಂದು ಮಡಿಕೇರಿ ನಗರದ ರೈಫಲ್ ರೇಂಜ್‌ನ ನಿವಾಸಿ ಎನ್.ಯು ಗೌತಮ್ ಎಂಬವರ ಮನೆಯ ಬಾಗಿಲು ಮುರಿದು 72 ಗ್ರಾಂ ಚಿನ್ನಾಭರಣ ಹಾಗೂ ಒಂದು ಎಸ್‌ಬಿಬಿಎಲ್ ಕೋವಿಯನ್ನು ಕಳವು ಮಾಡಿದ್ದು ಈ ಬಗ್ಗೆ ಮಡಿಕೇರಿ ನಗರದಲ್ಲಿ ಪ್ರಕರಣ ದಾಖಲಾಗಿತ್ತು.
                      ಮಡಿಕೇರಿ ನಗರದಲ್ಲಿ ನಡೆದ ಎರಡೂ ಪ್ರಕರಣಗಳಲ್ಲಿ ಆರೋಪಿತರು ರಿವಾಲ್ವರ್ ಹಾಗೂ ಬಂದೂಕನ್ನು ಕಳವು ಮಾಡಿದ್ದರಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರ ಮಾರ್ಗದರ್ಶನದಂತೆ ತನಿಖೆಯನ್ನು ತೀವ್ರಗೊಳಿಸಿದ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕರು ಹಾಗೂ ಸಿಬ್ಬಂದಿಗಳು ಈ ಹಿಂದೆ ಮನೆ ಕಳವು ಪ್ರಕರಣಗಲ್ಲಿ ಜೈಲಿನಿಂದ ಬಿಡುಗಡೆಯಾದ ವ್ಯಕ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ತನಿಖೆ ನಡೆಸುತ್ತಿದ್ದು ಈ ಸಂದರ್ಭ ದೊರೆತ ಸುಳಿವಿನ ಮೇರೆಗೆ ಪ್ರಕರಣದ ಓರ್ವ ಆರೋಪಿ ಕೇರಳದ ಇರಿಟ್ಟಿಯ ಉಲಿಕಲ್ ನಿವಾಸಿ ಪ್ರಸ್ತುತ ಸೋಮವಾರಪೇಟೆಯ ಗಾಂಧಿನಗರದಲ್ಲಿ ವಾಸವಿರುವ ಸಲೀಂ ಎಂಬಾತನನ್ನು ಸೋಮವಾರಪೇಟೆಯಲ್ಲಿ ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ವಿಚಾರಣೆಯ ವೇಳೆ ಸಲೀಮನು ತನ್ನ ಸಹಚರರಾದ ಗರಗಂದೂರು ಗ್ರಾಮದ ಶರತ್ ಹಾಗೂ ಸೋಮವಾರಪೇಟೆಯ ಅನಿಲ್ ಎಂಬುವವರ ಬಗ್ಗೆ ಸುಳಿವು ನೀಡಿದ್ದಾನೆ. ಆತ ನೀಡಿದ ಮಾಹಿತಿಯನ್ನಾಧರಿಸಿ ಶರತ್ ಹಾಗೂ ಅನಿಲ್ ರವರನ್ನು ಗರಗಂದೂರು ಹಾಗೂ ಸುಂಠಿಕೊಪ್ಪದಲ್ಲಿ ವಶಕ್ಕೆ ಪಡೆದ ಜಿಲ್ಲಾ ಅಪರಾಧ ಪತ್ತೆ ದಳದ ತಂಡ ಮೂವರು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿ ಆರೋಪಿ ಸಲೀಂ, ಶರತ್ ಹಾಗೂ ಅನಿಲ್ ರವರು ಒಂದು ತಂಡವಾಗಿ ಸೇರಿ ಗೋಣಿಕೊಪ್ಪ ನಗರದಲ್ಲಿ ಒಂದು ಹಾಗೂ ಮಡಿಕೇರಿ ನಗರದಲ್ಲಿ ಎರಡು ಕಳವು ಮಾಡಿದ್ದು, ಈ ಕಳವುಗಳನ್ನು ಮಾಡಲು ಆಯುಧಗಳನ್ನು ಆರೋಪಿ ಅನಿಲ್ ಒದಗಿಸುತ್ತಿದ್ದನೆಂದು ವಿಚಾರಣೆಯಿಂದ ತಿಳಿದು ಬಂದಿರುತ್ತದೆ. ಹಾಗೂ ಕಳವು ಮಾಡಿದ ಸ್ವತ್ತುಗಳನ್ನು ಶರತ್ ಹಾಗೂ ಅನಿಲ್ ಸೇರಿ ಶುಂಠಿಕೊಪ್ಪ ಹಾಗೂ ತಮಿಳುನಾಡಿನ ವೆಲ್ಲೂರು ಜಿಲ್ಲೆಯ ಅಂಬೂರಿನಲ್ಲಿ ಮಾರಿ ಬಂದ ಹಣವನ್ನು ಎಲ್ಲರೂ ಸೇರಿ ಹಂಚಿಕೊಂಡಿರುವ ಬಗ್ಗೆ ತಪ್ಪೊಪ್ಪಿಕೊಂಡಿರುತ್ತಾರೆ.

                       ಅಲ್ಲದೆ ಆರೋಪಿ ಸಲೀಂನು ತನ್ನ ಮತ್ತೊಬ್ಬ ಸಹಚರ ಸವಿನ್ ಎಂಬಾತನೊಂದಿಗೆ ಸೇರಿ ದಿನಾಂಕ 03-07-2017 ರಂದು ವಿರಾಜಪೇಟೆಯ ಅರಮೆರಿ ಗ್ರಾಮದ ಶ್ರೀಮತಿ ಅನುಸೂಯ ಎಂಬವರ ಮನೆಯ ಬಾಗಿಲು ಮುರಿದು 70 ಸಾವಿರ ನಗದು ಹಾಗೂ 32 ಗ್ರಾಂ ಚಿನ್ನಾಭರಣವನ್ನು ಕಳವು ಮಾಡಿದ್ದು, ಸದರಿ ಚಿನ್ನಾಭರಣಗಳು ಸವಿನ್‌ನ ಬಳಿ ಇರುವುದಾಗಿ ಒಪ್ಪಿಕೊಂಡಿರುತ್ತಾನೆ.

ಬಂಧಿತ ಆರೋಪಿತರ ವಿವರ ಈ ಕೆಳಕಂಡಂತಿರುತ್ತದೆ.

1) ಸಲೀಂ ಟಿ.ಎ ತಂದೆ ಲೇಟ್ ಮೊಯ್ದು, 32 ವರ್ಷ, ವಾಸ: ಗಾಂಧಿನಗರ, ಸೋಮವಾರಪೇಟೆ, ಕೊಡಗು ಜಿಲ್ಲೆ. ಸ್ವಂತ ಊರು ಉಲಿಕ್ಕಲ್ ಗ್ರಾಮ, ಇರಿಟ್ಟಿ ತಾಲ್ಲೂಕು, ಕೇರಳ.
2) ಶರತ್. ಕೆ ತಂದೆ ಕೃಷ್ಣ, 25 ವರ್ಷ, ಗಾರೆ ಕೆಲಸ, ವಾಸ: ಟೆಲಿಫೋನ್ ಎಕ್ಸ್ಚೇಂಜ್ ಹತ್ತಿರ, ಗರಗಂದೂರು ಗ್ರಾಮ, ಶುಂಟಿಕೊಪ್ಪ ಹೋಬಳಿ, ಸೋಮವಾರಪೇಟೆ ತಾಲ್ಲೂಕು, ಕೊಡಗು ಜಿಲ್ಲೆ.
3) ಅನಿಲ್ ಕುಮಾರ್ @ ಅನಿ ತಂದೆ ಕೃಷ್ಣ .ಸಿ.ಕೆ, 43 ವರ್ಷ, ಗಾರೆ ಕೆಲಸ, ವಾಸ: ಗಾಂಧಿನಗರ, ಸೋಮವಾರಪೇಟೆ ನಗರ, ಕೊಡಗು ಜಿಲ್ಲೆ.

                       ಪ್ರಕರಣದ ಪ್ರಮುಖ ಆರೋಪಿ ಸಲೀಂ 2008 ರಿಂದ ಇಲ್ಲಿಯವರೆಗೆ ಕೇರಳದ ಇರಿಟ್ಟಿಯಲ್ಲಿ ನಾಲ್ಕು ಹಾಗೂ ವಿರಾಜಪೇಟೆಯ ಮೂರು ಪ್ರಕರಣಗಳು ಸೇರಿದಂತೆ ಒಟ್ಟು 7 ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಒಂದು ಪ್ರಕರಣದಲ್ಲಿ 4 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿರುತ್ತಾನೆ. ಈತನ ವಿರುದ್ಧ ವಿರಾಜಪೇಟೆ ಪೊಲೀಸ್ ಠಾಣೆಯ ಮೂರು ಪ್ರಕರಣಗಳಿದ್ದು ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದಾಗಿರುತ್ತದೆ. 2ನೇ ಆರೋಪಿ ಶರತ್.ಕೆ ಮತ್ತು 3ನೇ ಆರೋಪಿ ಅನಿಲ್ ಕುಮಾರ್ ವಿರುದ್ಧ ಈವರೆಗೆ ಯಾವುದೇ ಪ್ರಕರಣ ದಾಖಲಾಗಿರುವುದಿಲ್ಲ.

ಗೋಣಿಕೊಪ್ಪ ಮತ್ತು ಮಡಿಕೇರಿಯಲ್ಲಿ ನಡೆದ ಒಟ್ಟು 3 ಮನೆ ಕನ್ನ ಕಳವು ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಂದ
1) ಒಂದು . 22 ರಿವಾಲ್ವರ್, 3 ಸಜೀವ ಗುಂಡುಗಳು
2) ಒಂದು ಎಸ್‌ಬಿಬಿಎಲ್ ಬಂದೂಕು
2) 492 ಗ್ರಾಂ ಚಿನ್ನಾಭರಣ ಸುಮಾರು ರೂ.13,67,000/-
3) 1 ದ್ವಿಚಕ್ರ ವಾಹನ
4) ಒಂದು ಕಾರ್ ಹಾಗೂ
5) ಕಳವು ಮಾಡಿದ ನಗದು ಹಣದಿಂದ ಖರೀದಿಸಿದ 1 ದ್ವಿಚಕ್ರ ವಾಹನ.
ಸೇರಿದಂತೆ ಒಟ್ಟು ಸುಮಾರು ರೂ. 18 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿರುತ್ತದೆ.
                    
                          ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ರಾಜೇಂದ್ರ ಪ್ರಸಾದ್ ಐಪಿಎಸ್ ಹಾಗೂ ಮಡಿಕೇರಿ ಉಪ ವಿಭಾಗದ ಉಪಾಧೀಕ್ಷಕರಾದ ಕೆ.ಎಸ್. ಸುಂದರ್ ರಾಜ್ ರವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಜಿಲ್ಲಾ ಅಪರಾಧ ಪತ್ತೆ ದಳದ ಪೊಲೀಸ್ ನಿರೀಕ್ಷಕ ಎಂ. ಮಹೇಶ್ ರವರ ನೇತೃತ್ವದಲ್ಲಿ ಸಿಬ್ಬಂದಿಗಳಾದ ಎ.ಎಸ್.ಐ ಕೆ.ವೈ.ಹಮೀದ್, ಎ.ಎಸ್‌.ಐ. ಎನ್.ಟಿ. ತಮ್ಮಯ್ಯ, ಸಿಬ್ಬಂದಿಗಳಾದ ವಿ.ಜಿ.ವೆಂಕಟೇಶ್, ಕೆ.ಎಸ್.ಅನಿಲ್‌ ಕುಮಾರ್, ಎಂ.ಎನ್.ನಿರಂಜನ್, ಬಿ.ಎಲ್. ಯೊಗೇಶ್ ಕುಮಾರ್, ಕೆ.ಆರ್.ವಸಂತ, ಸಜಿ, ಸುರೇಶ್ ಹಾಗೂ ಚಾಲಕರಾದ ಕೆ.ಎಸ್. ಶಶಿಕುಮಾರ್, ಬಿ.ಸಿ. ಶೇಷಪ್ಪ ಮುಂತಾದವರು ಪಾಲ್ಗೊಂಡಿದ್ದು, ಇವರ ಕಾರ್ಯವೈಖರಿಯನ್ನು ಶ್ಲಾಘಿಸಿ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ನಗದು ಬಹುಮಾನವನ್ನು ಘೋಷಿಸಿರುತ್ತಾರೆ.

Thursday, October 12, 2017

ಮಾದಕ ವಸ್ತು ಸಾಗಾಟ:

ದಿನಾಂಕ 11-10-2017 ರಂದು ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರವರಿಗೆ ವಿರಾಜಪೇಟೆಯ ಮೊಹಮ್ಮದ್ ತಾರೀಕ್ ಎಂಬುವವರು ಚರಸ್ ಎಂಬ ಮಾದಕ ವಸ್ತುವನ್ನು ಮಡಿಕೇರಿಯಲ್ಲಿ ಸಾರ್ವಜನಿಕರಿಗೆ ಮಾರಾಟ ಮಾಡಲು ಮೊಟಾರ್ ಬೈಕ್ ನಲ್ಲಿ ಬರುತ್ತಿರುವುದಾಗಿ ಬಂದ ಮಾಹಿತಿ ಮೇರೆ, ಈ ಬಗ್ಗೆ ಶ್ರೀ ಪಿ. ರಾಜೇಂದ್ರ ಪ್ರಸಾದ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮತ್ತು ಶ್ರೀ ಸುಂದರ್ ರಾಜ್, ಡಿವೈಎಸ್ಪಿ, ಮಡಿಕೇರಿ ಉಪ ವಿಭಾಗ ರವರ ಮಾರ್ಗದರ್ಶನದಲ್ಲಿ ಸಿ.ಪಿ.ಐ ಮಡಿಕೇರಿ ಗ್ರಾಮಾಂತರ ವೃತ್ತ ಮಡಿಕೇರಿ, ಪಿ.ಎಸ್.ಐ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ, ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ಸಿಬ್ಬಂದಿಯೊಂದಿಗೆ ಹಾಕತ್ತೂರು ಗ್ರಾಮದ ಕೆಂಬಡತಂಡ ತಿಮ್ಮಯ್ಯ ರವರ ವಾಸದ ಮನೆಯ ಮುಂದಿನ ವಿರಾಜಪೇಟೆ-ಮಡಿಕೇರಿ ಸಾರ್ವಜನಿಕ ತಾರು ರಸ್ತೆಯಲ್ಲಿ KA-12-Q-1247 ರ ಸ್ಕೂಟರ್ ನಲ್ಲಿ ಬರುತ್ತಿದ್ದ ಮೊಹಮ್ಮದ್ ತಾರೀಕ್ ಎಂಬುವವರನ್ನು ತಡೆದು ನಿಲ್ಲಿಸಿ ಪರಿಶೀಲಿಸಿದಾಗ ಸ್ಕೂಟರ್ ನ ಸೀಟಿನ ಕೆಳಭಾಗದ ಲಗ್ಗೇಜ್ ಬಾಕ್ಸ್ ನಲ್ಲಿದ್ದ 300 ಗ್ರಾಂ ತೂಕದ ಛರಸ್ ಅಂದಾಜು ಮೌಲ್ಯ 1.20.000/- ಅನ್ನು ವಶಪಡಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಾರಿ ತಡೆದು ಕೊಲೆ ಬೆದರಿಕೆ:

     ದಿನಾಂಕ 22-9-2017 ರಂದು ಬೆಳಿಗ್ಗೆ 1—45 ಗಂಟೆಗೆ ವಿರಾಜಪೇಟೆ ನಗರದ ಅಯ್ಯಪ್ಪ ಸ್ವಾಮಿ ರಸ್ತೆಯಲ್ಲಿ ವಾಸವಾಗಿರುವ ಜಿ.ಕೆ. ಗಣೇಶ್ ಎಂಬವರ ಬಾಪ್ತು ಗಣೇಶ್ ಟ್ರೇಡರ್ಸ್ ಅಂಗಡಿಗೆ ವ್ಯಾಪಾರ ವಿಷಯದಲ್ಲಿ ಆರೋಪಿಗಳಾದ ವಿ.ಕೆ. ಪ್ರವೀಣ್ ಮತ್ತು ವಿ.ಕೆ. ಗುರುಪ್ರಸಾದ್ ರವರು ಹಳೇಯ ವೈಷಮ್ಯದಿಂದ ಅಕ್ರಮ ಪ್ರವೇಶ ಮಾಡಿ ಜಿ.ಕೆ. ಗಣೇಶ್ ರವರನ್ನು ಅಡ್ಡಗಟ್ಟಿ, ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆ ಹಾಕಿರುತ್ತಾರೆಂದು ನೀಡಿದ ದೂರಿನ ಮೇರೆಗೆ ವಿರಾಜಪೇಟೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ನೀರಿನ ವಿಚಾರದಲ್ಲಿ ಜಗಳ:

     ಶನಿವಾರಸಂತೆ ಠಾಣಾ ಸರಹದ್ದಿನ ಗುಂಡೂರಾವ್ ಬಡಾವಣೆ ನಿವಾಸಿ ಸುಬ್ರಮಣ್ಯ ಎಂಬವರೊಂದಿಗೆ ಅವರ ಪಕ್ಕದ ಮನೆಯ ನಿವಾಸಿ ವೇಧಮೂರ್ತಿ ಎಂಬವರು ದಿನಾಂಕ 11-10-2017 ರಂದು ನೀರಿನ ಪೈಪನ್ನು ಅಳವಡಿಸಿಕೊಳ್ಳುವ ವಿಚಾರದಲ್ಲಿ ಜಗಳ ಮಾಡಿ ಕಬ್ಬಿಣದ ಸಲಾಕೆಯನ್ನು ತೆಗೆದುಕೊಂಡು ಸುಬ್ರಮಣ್ಯ ರವರ ತಲೆಗೆ ಹಾಗೂ ಮೈ ಕೈಗೆ ಹೊಡೆದು ರಕ್ತಗಾಯಪಡಿಸಿರುತ್ತಾರೆಂದು ಅಲ್ಲದೆ ಕೊಲೆ ಮಾಡುವುದಾಗಿ ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ:

      ಅನಾರೋಗ್ಯದ ಹಿನ್ನೆಲೆಯಲ್ಲಿ ಮನನೊಂದು ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರಪೇಟೆ ನಗರದಲ್ಲಿ ನಡೆದಿದೆ. ಸೋಮವಾರಪೇಟೆ ನಗರದ ತ್ಯಾಗರಾಜ ರಸ್ತೆ ನಿವಾಸಿ ಶ್ರೀಮತಿ ಜಿ.ಎಸ್. ವೈಶಾಲಿ ಎಂಬವರ ಪತಿ ಡಿ.ಟಿ. ವೆಂಕಟೇಶ್ ಎಂಬವರು ಕೆಲವು ದಿನಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ದಿನಾಂಕ 11-10-2017 ರಂದು ತನ್ನ ವಾಸದ ಮನೆಯಲ್ಲಿ ಯಾರು ಇಲ್ಲದೆ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನುಷ್ಯ ಕಾಣೆ:


     ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಹೇರೂರು ಗ್ರಾಮದ ನಿವಾಸಿ ಪಾರ್ವತಿ ಎಂಬವರ ತಮ್ಮ ಕೂಸು @ ಮುತ್ತುರಾಜ ಎಂಬವರು ದಿನಾಂಕ 9-10-2017 ರಂದು ಮದ್ಯಪಾನ ಮಾಡುವ ಸಲುವಾಗಿ ರಾತ್ರಿ 12-00 ಗಂಟೆ ಸಮಯದಲ್ಲಿ ಮನೆಯಿಂದ ಹೋಗಿ ಬರುವುದಾಗಿ ಹೇಳಿ ಹೋಗಿದ್ದು ನಂತರ ಮನೆಗೆ ಬಾರದೆ ಕಾಣೆಯಾಗಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿ ಮೇಲೆ ಹಲ್ಲೆ:

    ಸಿದ್ದಾಪುರ ಠಾಣಾ ಸರಹದ್ದಿನ ಬಾಡಗ ಬಾಣಂಗಾಲ ಗ್ರಾಮದ ನಿವಾಸಿ ಹೆಚ್.ಪಿ. ಸುರೇಶ ಎಂಬವರು ದಿನಾಂಕ 7-10-2017 ರಂದು ಮಾಲ್ದಾರೆಯ ಸಾರ್ವಜನಿಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮೈತಾಲ್ಪುರ ಗ್ರಾಮದ ಚುಬ್ರು ಎಂಬವರು ಕಾರಿನಲ್ಲಿ ಬಂದು ಕಾರಿಗೆ ಜಾಗ ಬಿಡಲಿಲ್ಲ ವೆಂದು ಜಗಳ ಮಾಡಿ ಹಲ್ಲೆ ಮಾಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Wednesday, October 11, 2017

ಆಟೋ ರಿಕ್ಷಾ ಅಪಘಾತ
                 ದಿನಾಂಕ 9-10-2017 ರಂದು ಮಡಿಕೇರಿಯ ತ್ಯಾಗರಾಜ ಕಾಲೋನಿಯ ನಿವಾಸಿ ಖತೀಜ, ಮಮ್ತಾಜ್, ಸಮಿಯವರು ಮಡಿಕೇರಿ ನಗರದಿಂದ ಆಟೋ ಬಾಡಿಗೆ ಮಾಡಿಕೊಂಡು ಮನೆಗೆ ಹೋಗುತ್ತಿರುವಾಗ ತ್ಯಾಗರಾಜ ಕಾಲೋನಿಯ ಮಸೀದಿಯ ಹತ್ತಿರ ತಲುಪುವಾಗ ಆಟೋವನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಆಟೋ ರಿಕ್ಷಾ ಮಗುಚಿ ಬಿದ್ದ ಪರಿಣಾಮ ಆಟೋದಲ್ಲಿದ್ದವರಿಗೆ ಗಾಯವಾಗಿದ್ದು ಈ ಬಗ್ಗೆ ಮಡಿಕೇರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ತೇಗದ ಮರ ಕಳವು
                  ವಿರಾಜಪೇಟೆ ತಾಲೂಕಿನ ಬಾಡಗ ಬಾಣಂಗಾಲ ಗ್ರಾಮದ ನಿವಾಸಿಯಾದ ಹೇಮಚಂದ್ರ ಎಂಬುವವರು ದಿನಾಂಕ 8-10-2017 ರಂದು ಮಾಯಮುಡಿಗೆ ನೆಂಟರ ಮನೆಗೆ ಹೋಗಿದ್ದವರು ದಿನಾಂಕ 10-10-2017 ರಂದು ವಾಪಾಸ್ಸು ಮನೆಗೆ ಬಂದಿದ್ದು, ಸದರಿಯವರು ಮನೆಯಲ್ಲಿಲ್ಲದ ಸಮಯದಲ್ಲಿ ಅವರ ತೋಟದಲ್ಲಿದ್ದ 6 ಅಡಿ ಸುತ್ತಳತೆಯ ತೇಗದ ಮರವನ್ನು ಯಾರೋ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಹೇಮಚಂದ್ರರವರು ನೀಡಿದ ದೂರಿನ ಮೇರೆಗೆ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಮದ್ಯ ಮಾರಾಟ 
                 ದಿನಾಂಕ 10-10-2017 ರಂದು ಕುಶಾಲನಗರ ಗ್ರಾಮಾಂತರ ಠಾಣಾಧಿಕಾರಿಯವರಾದ ಮಹೇಶ್ ರವರಿಗೆ ಸಿಕ್ಕಿದ ಮಾಹಿತಿ ಮೇರೆಗೆ ಸಿಬ್ಬಂದಿಯವರೊಂದಿಗೆ ಹೆಬ್ಬಾಲೆ ಗ್ರಾಮದ ಮಾರ್ಕೆಟ್ ಆವರಣಕ್ಕೆ ದಾಳಿ ಮಾಡಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಶಿವಣ್ಣ ಎಂಬುವವರನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿಕೊಂಡಿರುತ್ತಾರೆ.