Saturday, April 15, 2017

ಅಪರಿಚಿತ ವ್ಯಕ್ತಿಗೆ ಬೈಕ್ ಡಿಕ್ಕಿ:

     ಅಪರಿಚಿತ ವಯೋವೃದ್ದರೊಬ್ಬರಿಗೆ  ಬೈಕೊಂದು ಡಿಕ್ಕಿಯಾಗಿ ಗಾಯಗೊಂಡ ಘಟನೆ ಕುಶಾಲನಗರ ಸಮೀಪದ ಕೂಡಿಗೆ ಗ್ರಾಮದಲ್ಲಿ ನಡೆದಿದೆ. ದಿನಾಂಕ 14-4-2017 ರಂದು ಸಂಜೆ 6-30 ಗಂಟೆಯ ಸಮಯದಲ್ಲಿ ಕೂಡಿಗೆ ಗ್ರಾಮದಲ್ಲಿರುವ ಕೆನರಾ ಬ್ಯಾಂಕ್ ಮುಂದೆ ಸಾರ್ವಜನಿಕ ರಸ್ತೆಯಲ್ಲಿ ಅಪರಿಚಿತ ವಯೋವೃದ್ದರೊಬ್ಬರು ನಡೆದುಕೊಂಡು ಹೋಗುತ್ತಿದ್ದಾಗ  ಬೈಕ್ ಸವಾರನೊಬ್ಬ ಬೈಕ್ ನ್ನು ದುಡುಕಿನಿಂದ ಚಲಾಯಿಸಿಕೊಂಡು ಬಂದು ಸದರಿ  ಅಪರಿಚಿತ ವ್ಯಕ್ತಿಗೆ  ಡಿಕ್ಕಿಪಡಿಸಿದ ಪರಿಣಾಮವಾಗಿ ಅವರು ಗಾಯಗೊಂಡಿದ್ದು, ಬೈಕ್ ಸವಾರ ಬೈಕನ್ನು ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದು, ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ. 

ಮೋಟಾರ್ ಸೈಕಲ್ ಕಳವು:

     ಮನೆಯ ಹಿಂದಿನ ಶೆಡ್ಡಿನಲ್ಲಿ ನಿಲ್ಲಿಸಿದ ಬೈಕನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಮಡಿಕೇರಿ ಗ್ರಾಮಾಂತರ ಠಾಣಾ ಸರಹದ್ದಿನ ಮೇಕೇರಿ ಗ್ರಾಮದಲ್ಲಿ ನಡೆದಿದೆ. ಮಡಿಕೇರಿ ತಾಲೋಕು ಮೇಕೇರಿ ಗ್ರಾಮದ ನಿವಾಸಿ ಡಿ.ಎ. ಕುಶಾಲಪ್ಪ ಎಂಬವರು ದಿನಾಂಕ 8-4-2017 ರಂದು ರಾತ್ರಿ ತಮ್ಮ ಬಾಪ್ತು ಮೋಟಾರ್ ಸೈಕಲನ್ನು ತಮ್ಮ ಮನೆಯ ಹಿಂದಿನ ಶೆಡ್ ನಲ್ಲಿ ನಿಲ್ಲಿಸಿದ್ದು, ಸದರಿ ಮೋಟಾರ್ ಸೈಕಲನ್ನು ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದೇವಾಲಯದ ಹುಂಡಿ ಕಳವು:

     ದಿನಾಂಕ 13.03.2017 ರಂದು ರಾತ್ರಿ ಸಮಯದಲ್ಲಿ ಸುಂಟಿಕೊಪ್ಪ ನಗರದ ಮಾದಾಪುರ ರಸ್ತೆಯಲ್ಲಿರುವ ವೃಕ್ಷೋದ್ಬವ ಗಣಪತಿ ದೇವಸ್ಥಾನದ ಕಾಂಪೌಂಡ್‌ ಗೋಡೆಗೆ ಅಳವಡಿಸಿರುವ ದೇವಸ್ಥಾನದ ಕಾಣಿಗೆ ಹುಂಡಿಯನ್ನು ಯಾರೋ ಕಳ್ಳರು ಹಾರೆ ಕೋಲಿನಿಂದ ಮೀಟಿ ಹುಂಡಿಯನ್ನು ಒಡೆದು ಹುಂಡಿಯಲ್ಲಿದ್ದ ಅಂದಾಜು 5000/- ರೂ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುವ ಬಗ್ಗೆ ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ದ್ವೇಷದ ಹಿನ್ನೆಲೆ ವ್ಯಕ್ತಿ ಮೇಲೆ ಹಲ್ಲೆ:

     ಸೋಮವಾರಪೇಟೆ ಪೊಲೀಸ್ ಠಾಣಾ ಸರಹದ್ದಿನ ಕಿಕ್ಕರಳ್ಳಿ ಗ್ರಾಮದ ನಿವಾಸಿ ಗಣಪತಿ ಎಂಬವರು ದಿನಾಂಕ 14.04.2017 ರಂದು ಕಿಕ್ಕರಳ್ಳಿ ಗ್ರಾಮದಿಂದ ಸೋಮವಾರಪೇಟೆಗೆ ಬಸ್ಸಿನಲ್ಲಿ ಕುಳಿತುಕೊಂಡು ಪ್ರಯಾಣಿಸುತ್ತಿರುವಾಗ ಕಿಕ್ಕರಳ್ಳಿ ಗ್ರಾಮದ ರವಿ ಎಂಬವರು ಗಣಪತಿ ಕುಳಿತಲ್ಲಿಗೆ ಹೋಗಿ ಹಳೆ ವೈಷಮ್ಯದಿಂದ ಕತ್ತಿಯಿಂದ ಎರಡು ತೊಡೆಗಳಿಗೆ ಕಡಿದು ರಕ್ತಗಾಯ ಪಡಿಸಿದಲ್ಲದೆ ಕತ್ತಿಯಿಂದ ನಿನ್ನನ್ನು ಕಡಿದು ಕೊಲೆ ಮಾಡುತ್ತೇನೆಂದು ಕೊಲೆ ಬೆದರಿಕೆ ಒಡ್ಡಿರುತ್ತಾರೆಂದು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆ ಮೇಲೆ ಹಲ್ಲೆ, ಕೊಲೆ ಬೆದರಿಕೆ:

      ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಕಿಕ್ಕರಳ್ಳಿ ಗ್ರಾಮದ ನಿವಾಸಿ ಶ್ರೀಮತಿ ಎ.ಆರ್. ಹೇಮಾವತಿರವರು ದಿನಾಂಕ 14-4-2017 ರಂದು ಸೋಮವಾಪೇಟೆ ಪೊಲೀಸ್ ಠಾಣೆಗೆ ಹೋಗಲು ಕಿಕ್ಕರಳ್ಳಿ ಗ್ರಾಮದಲ್ಲಿ ಬಸ್ಸನ್ನು ಹತ್ತಿದಾಗ ಆರೋಪಿ ಗಣಪತಿ ಎಂಬವರು ಸದರಿ ಹೇಮಾವತಿಯವರನ್ನು ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿರುತ್ತಾರೆಂದು ಸದರಿ ಹೇಮಾವತಿಯವರು ನೀಡಿದ ದೂರಿನ ಮೇರೆಗೆ ಸೋಮವಾರಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಮನೆಗೆ ಅಕ್ರಮ ಪ್ರವೇಶ ಹಲ್ಲೆ:

     ವ್ಯಕ್ತಿಯೊಬ್ಬರು ಮನೆಗೆ ಅಕ್ರಮ ಪ್ರವೇಶ ಮಾಡಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಶನಿವಾರಸಂತೆಯ ಕೆರೆಗನಳ್ಳಿ ಗ್ರಾಮದಲ್ಲಿ ನಡೆದಿದೆ. ಶನಿವಾರಸಂತೆ ಠಾಣಾ ಸರಹದ್ದಿನ ಕೆರೆಗನಳ್ಳಿ ಗ್ರಾಮದ ನಿವಾಸಿ ಶ್ರೀಮತಿ ವಿಮಲ ಎಂಬವರು ದಿನಾಂಕ 13-4-2017 ರಂದು ಸಂಜೆ 6-30 ಗಂಟೆಗೆ ತಮ್ಮ ಮನೆಯಲ್ಲಿ ಇರುವಾಗ್ಗೆ ಕೆರೆಗನಳ್ಳಿ ಗ್ರಾಮದ ನಿವಾಸಿ ಮಧು ಎಂಬ ವ್ಯಕ್ತಿ ಏಕಾಏಕಿ ಶ್ರೀಮತಿ ವಿಮಲನವರ ಮನೆಗೆ ಅಕ್ರಮ ಪ್ರವೇಶ ಮಾಡಿ ಮಧುರವರ ತಾಯಿಯೊಂದಿಗೆ ಫಿರ್ಯಾದಿ ವಿಮಲರವರು ಕೆಲಸಮಾಡುವ ವಿಚಾರದಲ್ಲಿ ಜಗಳ ಮಾಡಿ ದೊಣ್ಣೆಯಿಂದ ಹಲ್ಲೆ ನಡೆಸಿ ಕೊಲೆಬೆದರಿಕೆ ಒಡ್ಡಿರುವ ಬಗ್ಗೆ ಶನಿವಾರಸಂತೆ ಪೊಲೀಸರು ಠಾಣೆಯಲ್ಲಿ ಪ್ರಕರಣ ದಾಖಲಿಸಿರುತ್ತಾರೆ.