Monday, February 20, 2017

ಅಕ್ರಮ ಜೂಜಾಟ 
             ದಿನಾಂಕ 19-2-2017 ರಂದು ಕುಶಾಲನಗರದ ಸುಂದರನಗರ ಗ್ರಾಮದಲ್ಲಿ ಇಸ್ಪೇಟು ಎಲೆಗಳಿಂದ ಜೂಜಾಟ ಆಡುತ್ತಿದ್ದ ಸ್ಥಳಕ್ಕೆ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕರಾದ ಮಹೇಶ್ ಮತ್ತು ಸಿಬ್ಬಂದಿಯವರು ದಾಳಿ ಮಾಡಿ 5 ಜನ ಆರೋಪಿಗಳನ್ನು ಹಾಗೂ 3,220 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.

ಕಾರಿಗೆ ಲಾರಿ ಡಿಕ್ಕಿ
              ದಿನಾಂಕ 19-2-2017 ರಂದು ಮಂಗಳೂರಿನ ಬಿಜೈನ ನಿವಾಸಿ ಶ್ರೇಯಸ್ ಕೆ ಭಟ್ ರವರು ತಮ್ಮ ತಂದೆ ಮತ್ತು ತಾಯಿಯವರೊಂದಿಗೆ ಕಾರಿನಲ್ಲಿ ಮಂಳೂರಿನಿಂದ ಮೈಸೂರಿಗೆ ಹೋಗುತ್ತಿರುವಾಗ ಕಾಟಕೇರಿಯ ತಿರುವು ರಸ್ತೆಯಲ್ಲಿ ಎದುರುಗಡೆಯಿಂದ ಬಂದ ಲಾರಿಯನ್ನು ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ಹೋಗಿ ಕಾರಿಗೆ ಡಿಕ್ಕಿ ಪಡಿಸಿದ್ದು, ಶ್ರೇಯಸ್ ರವರ ತಂದೆ ತಾಯಿಯವರಿಗೆ ಗಾಯವಾಗಿದ್ದು ಈ ಬಗ್ಗೆ ಶ್ರೇಯಸ್ ರವರು ನೀಡಿದ ದೂರಿಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Sunday, February 19, 2017

 ಅಕ್ರಮ ಮರಳು ಸಾಗಾಟ:

     ಅಕ್ರಮವಾಗಿ ವಾಹನದಲ್ಲಿ ಮರಳನ್ನು ಸಾಗಾಟಾ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ದಿನಾಂಕ `18-2-2017 ರಂದು ಬೆಳಿಗ್ಗೆ 8-00 ಗಂಟೆಯ ಸಮಯದಲ್ಲಿ ಕೆಎ-12 ಬಿ-3261 ರ ಬೋಲೇರೋ ಪಿಕ್ ಆಫ್ ವಾಹನದಲ್ಲಿ ಅಕ್ರಮವಾಗಿ ಮರಳನ್ನು ಸಾಗಾಟ ಮಾಡುತ್ತಿದ್ದನ್ನು ಸಿದ್ದಾಪುರ ಠಾಣೆಯ ಎಎಸ್ಐ ಹಾಗು ಸಿಬ್ಬಂದಿಯವರು ಪತ್ತೆಹಚ್ಚಿ ಮರಳು ತುಂಬಿದ ವಾಹನವನ್ನು ವಶಪಡಿಸಿ ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಅಕ್ರಮ ಮರಳನ್ನು ಸಾಗಿಸುತ್ತಿದ್ದ 2 ಲಾರಿಗಳು ಪೊಲೀಸ್ ವಶಕ್ಕೆ:

     ಅಕ್ರಮವಾಗಿ 2 ಲಾರಿಗಳಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದ ವ್ಯಕ್ತಿಗಳನ್ನು ಲಾರಿ ಸಮೇತವಾಗಿ ವಶಕ್ಕೆ ಪಡೆದ ಮಡಿಕೇರಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಶ್ರೀ ಎಸ್. ಶಿವಪ್ರಕಾಶ್ ರವರಿಗೆ ಬಂದ ಖಚಿತ ಮಾಹಿತಿ ಆದಾರದ ಮೇರೆಗೆ ಮಂಗಳೂರು ಕಡೆಯಿಂದ ಮಡಿಕೇರಿ ಕಡೆಗೆ ಅಕ್ರಮವಾಗಿ 2 ಲಾರಿಗಳಲ್ಲಿ ಮರಳನ್ನು ಸಾಗಾಟ ಮಾಡುತ್ತಿದ್ದವರ ಮೇಲೆ ಮಡಿಕೇರಿ ಗ್ರಾಮಾಂತರ ಠಾಣಾಧಿಕಾರಿ ಹಾಗು ಸಿಬ್ಬಂದಿಯವರು ಠಾಣಾ ಸರಹದ್ದಿನ ಸಂಪಾಜೆ ಗೇಟಿನ ಬಳಿ ದಾಳಿ ನಡೆಸಿ 5 ಮಂದಿ ಆರೋಪಿಗಳನ್ನು ಹಾಗು 2 ಮರಳು ತುಂಬಿದ ಲಾರಿಗಳನ್ನು ವಶಕ್ಕೆ ಪಡೆದು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿರುತ್ತಾರೆ. 

ಜೀವನದಲ್ಲಿ ಜುಗುಪ್ಸೆ ವಿಷ ಸೇವಿಸಿ ವ್ಯಕ್ತಿ ಆತ್ಮಹತ್ಯೆ:

     ವಿಪರೀತ ಸಾಲ ಮಾಡಿದ ವ್ಯಕ್ತಿಯೊಬ್ಬರು ಜೀವನದಲ್ಲಿ ಜುಗುಪ್ಸೆಗೊಂಡು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಘಟನೆ ವಿರಾಜಪೇಟೆ ಗ್ರಾಮಾಂತರ ಠಾಣಾ ಸರಹದ್ದಿನ ಕೆದಮುಳ್ಳೂರು ಗ್ರಾಮದಲ್ಲಿ ನಡೆದಿದೆ. ವಿರಾಜಪೇಟೆ ತಾಲೋಕು ಕೆದಮುಳ್ಳೂರು ಗ್ರಾಮದ ನಿವಾಸಿ ಮಾಳೇಟ್ಟೀರ ಈರಪ್ಪ (58) ಎಂಬವರು ಬ್ಯಾಂಕ ಹಾಗು ಇತರೆ ಕಡೆಯಿಂದ ಸಾಲವನ್ನು ಪಡೆದು ಮನೆ ಕಟ್ಟುತ್ತಿದ್ದು, ಈ ನಡುವೆ ಕಾರು ಅಪಘಾತದಲ್ಲಿ ಎರಡೂ ಕಾಲುಗಳಿಗೆ ತೀವ್ರ ಜಖಂಗೊಂಡ ಕಾರಣ ಸದರಿಯವರು ಜೀವನದಲ್ಲಿ ಜುಗುಪ್ಸೆಗೊಂಡು ದಿನಾಂಕ 17-2-2017 ರಂದು ರಾತ್ರಿ 8-30 ಗಂಟೆಯ ಸಮಯದಲ್ಲಿ ಯಾವುದೋ ವಿಷ ಪದಾರ್ಥವನ್ನು ಸೇವಿಸಿದ್ದು ಸದರಿಯವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಸಮಯದಲ್ಲಿ ಸದರಿ ವ್ಯಕ್ತಿ ಸಾವನಪ್ಪಿದ್ದು, ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿ ಆತ್ಮಹತ್ಯೆ:

     ಅನಾರೋಗ್ಯದಿಂದ ಬಳಲುತ್ತಿದ್ದ ವ್ಯಕ್ತಿಯೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಶಾಲನಗರ ಗ್ರಾಮಾಂತರ ಠಾಣಾ ಸರಹದ್ದಿನ ಹಳೆಕೂಡಿಗೆ ಗ್ರಾಮದಲ್ಲಿ ವಾಸವಾಗಿದ್ದ ರಾಜೇಶ ಎಂಬ ವ್ಯಕ್ತಿ ಕೆಲವು ಸಮಯದಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದು, ಇದೇ ವಿಚಾರವಾಗಿ ಬೇಸತ್ತು ದಿನಾಂಕ 17-2-2017 ರಂದು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ಅಕ್ರಮ ಮರಳು ಸಾಗಾಟ ಪತ್ತೆ:

     ಸುಂಟಿಕೊಪ್ಪ ಠಾಣಾಧಿಕಾರಿ ಶ್ರೀ ಅನೂಪ್ ಮಾದಪ್ಪ ನವರಿಗೆ ದಿನಾಂಕ 18-2-2017 ರಂದು ಬಂದ ಮಾಹಿತಿಯ ಮೇರೆಗೆ ಸಿಬ್ಬಂದಿಯೊಂದಿಗೆ ಗರಗಂದೂರು ಗ್ರಾಮದಲ್ಲಿ ಆರೋಪಿಗಳಾದ ಎಂ.ಕೆ. ಶಂಭು ಹಾಗು ಎ.ಕೆ. ಲೋಹಿತ್ ಎಂಬವರುಗಳು ಪಿಕ್ಅಪ್ ವಾಹನದದಲ್ಲಿ ಅಕ್ರಮವಾಗಿ ಮರಳನ್ನು ತುಂಬಿಸಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆಹೆಚ್ಚಿ ವಾಹನ ಹಾಗು ಆರೋಪಿಗಳನ್ನು ವಶಕ್ಕೆ ಪಡೆದು ಸುಂಟಿಕೊಪ್ಪ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. 

Saturday, February 18, 2017

ಬೈಕಿಗೆ ಓಮಿನಿ ವ್ಯಾನು ಡಿಕ್ಕಿ
              ದಿನಾಂಕ 17-2-2017 ರಂದು ಅರಕಲಗೋಗುವಿನ ದೊಡ್ಡಮಗ್ಗೆ ಗ್ರಾಮದ ನಿವಾಸಿ ಗಿರೀಶ ಎಂಬುವವರು ಮೋಟಾರು ಸೈಕಲಿನಲ್ಲಿ ಮಾದಾಪುರದ ಮುವತ್ತೋಕ್ಲು ಗ್ರಾಮದಲ್ಲಿರುವ ಭದ್ರಕಾಳಿ ದೇವಸ್ಥಾನಕ್ಕೆ ಹೋಗುತ್ತಿರುವಾಗ ಗರ್ವಾಲೆ ಗ್ರಾಮಕ್ಕೆ ತಲುಪುವಾಗ ಎದುರುಗಡೆಯಿಂದ ಓಮಿನಿ ವ್ಯಾನನ್ನು ಅದರ ಚಾಲಕ ಸೋಮವಾರಪೇಟೆಯ ನಿವಾಸಿ ಅಣ್ಣಯ್ಯ ಎಂಬುವವರು ಅಜಾಗರೂಕತೆಯಿಂದ ಚಾಲನೆ ಮಾಡಿ ಮೋಟಾರು ಸೈಕಲಿಗೆ ಡಿಕ್ಕಿಪಡಿಸಿ ಗಿರೀಶರವರಿಗೆ ಗಾಯಗಳಾಗಿದ್ದು ಈ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಅಕ್ರಮ ಜೂಜಾಟ
                  ದಿನಾಂಕ 17-2-2017 ರಂದು ವಿರಾಜಪೇಟೆ ನಗರ ಠಾಣೆಯ ಉಪನಿರೀಕ್ಷಕರಾದ ಸಂತೋಷ್ ಕಶ್ಯಪ್ ರವರು ನೆಹರು ನಗರದ ಅನ್ಸಾರ್ ಎಂಬುವವರ ಬಾಡಿಗೆ ಮನೆಗೆ ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಅಕ್ರಮ ಜೂಜಾಟವಾಡುತ್ತಿದ್ದ 12 ಜನರನ್ನು ಹಾಗೂ ಜೂಜಾಟಕ್ಕೆ ಬಳಸಿದ  12,050 ರೂ ಹಣವನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ಮುಂದಿನ ತನಿಖೆ ಕೈಗೊಂಡಿರುತ್ತಾರೆ.

ಜಾನುವಾರು ಕಳವು
              ವಿರಾಜಪೇಟೆ ತಾಲೂಕಿನ ಬೊಳ್ಳರಿಮಾಡು ಗ್ರಾಮದ ಬಿದ್ದಂಡ ಸುಬ್ಬಯ್ಯ ಹಾಗೂ ತಾತೀರ ಪೂವಯ್ಯ ಎಂಬುವವರಿಗೆ ಸೇರಿದ ಮೇಯಲು ಬಿಟ್ಟ 2 ಹಸುಗಳನ್ನು ದಿನಾಂಕ 8-2-2017 ರಂದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಸುಬ್ಬಯ್ಯನವರು ನೀಡಿದ ದೂರಿಗೆ ವಿರಾಜಪೇಟೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

ನೇಣು ಬಿಗಿದುಕೊಂಡು ಯುವಕನ ಆತ್ಮಹತ್ಯೆ
                ಯುವಕನೊಬ್ಬ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿದುಕೊಂಡು ಆತ್ಮ ಹತ್ಯೆ ಮಾಡಿಕೊಂಡಿರುವ ಘಟನೆ ಚೇರಳ ಶ್ರೀಮಂಗಲ ಗ್ರಾಮದಲ್ಲಿ ನಡೆದಿದೆ. ದಿನಾಂಕ 17-2-2017 ರಂದು ಚೇರಳ ಶ್ರೀಮಂಗಲ ಗ್ರಾಮದ ನಿವಾಸಿ ರಫಿಕ್ ಎಂಬುವವರ ಮಗ ರಾಸಿಕ್ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಈ ಬಗ್ಗೆ ತಂದೆ ರಫಿಕ್ ರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತಾರೆ.

Friday, February 17, 2017

ಲಾರಿ ಅಪಘಾತ:

     ಚಲಿಸುತ್ತಿದ್ದ ಲಾರಿಯೊಂದು ಅಪಘಾತಕ್ಕೀಡಾಗಿ ರಸ್ತೆಬದಿಯ ಸಿಗ್ನಲ್ ಕಂಬ ಮತ್ತು ಮನೆಯ ಕಾಂಪೌಂಡ್ಗೆ ಹಾನಿಹಾದ ಘಟನೆ ಕುಶಾಲನಗರ ಬಳಿಯ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ. ದಿನಾಂಕ 16-2-2017 ರಂದು ಈ ದಿನ ಬೆಳಗ್ಗೆ 06.45 ಎ ಎಂಗೆ ಕುಶಾಲನಗರ ಕಡೆ ಹೋಗುತ್ತಿದ್ದ ಕೆ ಎ 18 ಬಿ 4689 ಲಾರಿಯನ್ನು ಅದರ ಚಾಲಕ ಅತಿ ವೇಗ ಮತ್ತು ಅಜಾಗರೂಕತೆಯಿಂದ ಚಾಲಿಸಿದ ಪರಿಣಾಮ ರಸ್ತೆಬದಿಯ ಎರಡು ಚೆವರ್ ಲೆಟ್ ಸಿಗ್ನಲ್ ಕಂಬಗಳು ಮತ್ತು ಒಂದು ಸಾರ್ವಜನಿಕ ವಿದ್ಯತ್ ಕಂಬಕ್ಕೆ ಡಿಕ್ಕಿ ಹಾಗಿದ್ದು ಅಲ್ಲದೆ ಕುಶಾಲನಗರದ ಕೂಡ್ಲೂರು ಗ್ರಾಮದ ನಿವಾಸಿ ಎಂ.ಯು. ತಾಜುದ್ದೀನ್ ಎಂಬವರ ಮನೆಯ ಗೇಟ್ ,ಕಾಂಪೌಂಡ್ ಹಾಗು ಮನೆಯ ಮುಂದಿನ ಆರ್ ಸಿ ಸಿ ಬಾಗಕ್ಕೆ ಡಿಕ್ಕಿಯಾಗಿ ಅಂದಾಜು 250000 ನಷ್ಟ ಆಗಿದ್ದು ಈ ಸಂಬಂಧ ಕುಶಾಲನಗರ ಟ್ರಾಫಿಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

ಮೋಟಾರ್ ಬೈಕ್ ಗೆ ಜೀಪು ಡಿಕ್ಕಿ:

    ಮೋಟಾರ್ ಸೈಕಲಿಗೆ ಜೀಪೊಂದು ಡಿಕ್ಕಿಯಾಗಿ ಬೈಕ್ ಸವಾರ ಗಾಯಗೊಂಡ ಘಟನೆ ಸೋಮವಾರಪೇಟೆ ನಗರದ ಕಾಲೇಜು ರಸ್ತೆಯಲ್ಲಿ ಸಂಭವಿಸಿದೆ. ದಿನಾಂಕ 16-2-2017 ರಂದು ಫಿರ್ಯಾದಿ ಸೋಮವಾರಪೇಟೆ ಆಸ್ಪತ್ರೆ ವಸತಿ ಗೃಹದಲ್ಲಿ ವಾಸವಾಗಿರುವ ಎಸ್.ಬಿ. ಅಶೋಕ ಎಂಬವರು ತಮ್ಮ ಬಾಪ್ತು ಮೋಟಾರ್ ಸೈಕಲಿನಲ್ಲಿ ಸೋಮವಾರಪೇಟೆ ನಗರದ ಖಾಸಗಿ ಬಸ್ಸು ನಿಲ್ದಾಣದಿಂದ ಜೂನಿಯರ್ ಕಾಲೇಜು ಕಡೆಗೆ ಹೋಗುತ್ತಿದ್ದಾಗ ಎದುರುಗಡೆಯಿಂದ ಬಂದ ಜೀಪು ಡಿಕ್ಕಿಯಾಗಿ ಗಾಯಗೊಂಡಿದ್ದು, ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೀಗ ಮುರಿದು ನಗದು ಮತ್ತು ಚಿನ್ನಾಭರಣ ಕಳವು:

      ಸೋಮವಾರಪೇಟೆ ಠಾಣಾ ವ್ಯಾಪ್ತಿಯ ಹೊನ್ನವಳ್ಳಿ ಗ್ರಾಮದ ನಿವಾಸಿಗಳಾದ ಹೆಚ್. ಎನ್. ಮಹೇಶ ಮತ್ತು ಹೆಚ್.ಎನ್. ಮಂಜುನಾಥ ಎಂಬವರು ತಮ್ಮ ದೊಡ್ಡಮ್ಮನವರ ಮೊಮ್ಮಗ ತೀರಿಕೊಂಡಿದ್ದರಿಂದ ಶವಸಂಸ್ಕಾರಕ್ಕೆಂದು ದಿನಾಂಕ 16.02.2017 ರಂದು ಬೆಳಿಗ್ಗೆ 10:00 ಗಂಟೆಗೆ ಶನಿವಾರಸಂತೆಗೆ ಹೋಗಿದ್ದು ವಾಪಾಸ್ಸು ಮಧ್ಯಾಹ್ನ 02:00 ಗಂಟೆಗೆ ಬಂದು ನೋಡಲಾಗಿ ಹೆಚ್. ಎನ್. ಮಹೇಶ ಮತ್ತು ಹೆಚ್.ಎನ್. ಮಂಜುನಾಥರವರುಗಳ ಮನೆಯ ಮುಂಬಾಗಿಲಿನ ಬೀಗವನ್ನು ಯಾರೋ ಕಳ್ಳರು ಯಾವುದೋ ಆಯುಧದಿಂದ ಒಡೆದು ಹಾಕಿದ್ದು, ಹೆಚ್. ಎನ್. ಮಹೇಶರವರ ಮನೆಯ ಒಳಗಡಿ ಇಟ್ಟಿದ್ದ  ಗಾಡ್ರೇಜ್ ಬೀರುವಿನಿಂದ 12,000/- ರೂ ನಗದು ಹಣ ಹಾಗೂ 4 ಗ್ರಾಂ ತೂಕದ ಚಿನ್ನದ ಸರವನ್ನು ಹಾಗೆಯೇ ಹೆಚ್.ಎನ್. ಮಂಜುನಾಥರವರ ಮನೆಯಲ್ಲಿಟ್ಟಿದ್ದ ಗಾಡ್ರೇಜ್ ಬೀರುವಿನಿಂದ 10,000/- ರೂ ನಗದು ಹಣ ಹಾಗೂ 4 ಗ್ರಾಂ ತೂಕದ ಚಿನ್ನದ ಸರವನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಸಂಬಂಧ ಸೋಮವಾರಪೇಟೆ ಪೊಲೀಸರು 2 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.

ಮಗನಿಂದ ತಾಯಿ ಮೇಲೆ ಹಲ್ಲೆ:

      ಮಡಿಕೇರಿ ತಾಲೋಕು ಮುತ್ತಾರ್ ಮುಡಿ ಗ್ರಾಮದ ನಿವಾಸಿ ಶ್ರೀಮತಿ ರುಕ್ಮಿಣಿ ಎಂಬವರ ಮಗ ದಿನಾಂಕ 14-2-2017 ರಂದು ರಾತ್ರಿ 10-30 ಗಂಟೆ ಸಮಯದಲ್ಲಿ ಮದ್ಯಪಾನ ಮಾಡಿಕೊಂಡು ಮನೆಗೆ ಬಂದು ವಿನಾಕಾರಣ ತನ್ನ ತಾಯಿ ರುಕ್ಮಿಣಿರವರೊಂದಿಗೆ ಜಗಳ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅಲ್ಲದೆ ಕಡೆಯುವ ಗುಂಡುಕಲ್ಲನ್ನು ಕಾಲಿನ ಮೇಲೆ ಎತ್ತಿಹಾಕಿ ಗಾಯಪಡಿಸಿದ್ದು, ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಶ್ರೀಮತಿ ರುಕ್ಮಿಣಿರವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 

Thursday, February 16, 2017


ಅಕ್ರಮವಾಗಿ ಹೊಳೆಯಿಂದ ಮರಳು ತುಂಬಿಸುತ್ತಿದ್ದ ಲಾರಿಗಳ ವಶ
          ದಿನಾಂಕ 15-2-2017 ರಂದು ವಿರಾಜಪೇಟೆ ತಾಲೂಕಿನ ಅರಮೇರಿ ಗ್ರಾಮದ ಕದನೂರು ಹೊಳೆಯ ದಡದಲ್ಲಿ ಅಕ್ರಮವಾಗಿ ಲಾರಿಗಳಿಗೆ ಮರಳು ತುಂಬಿಸುತ್ತಿದ್ದಾರೆ ಎಂಬ ಮಾಹಿತಿ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯ ಉಪನಿರೀಕ್ಷಕರು ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಮರಳನ್ನು ತುಂಬಿಸುತ್ತಿದ್ದ ಎರಡು ಲಾರಿಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿರುತ್ತಾರೆ.

ಅಪಘಾತ ಪ್ರಕರಣ
           ದಿನಾಂಕ 15-2-2017 ರಂದು ವಿರಾಜಪೇಟೆ ತಾಲೂಕಿನ ಮಾಯಮುಡಿ ಗ್ರಾಮದ ಮಡಿಕೆಬೀಡುವಿನ ನಿವಾಸಿ ಅಭಿಷೇಕ್ ರವರು ಧನುಗಾಲ ಗ್ರಾಮದ ನಿವಾಸಿ ಹೇಮಂತ್ ಕುಮಾರ್ ರರೊಂದಿಗೆ ಮೋಟಾರು ಸೈಕಲ್ ನಲ್ಲಿ ಗೋಣಿಕೊಪ್ಪಲುವಿನ ಕಡೆಗೆ ಹೋಗುತ್ತಿರುವಾಗ ಬಾಳಾಜಿ ಗ್ರಾಮದ ಕಮಟೆ ದೇವಸ್ಥಾನದ ಹತ್ತಿರ ತಲುಪುವಾಗ ಚಾಲಕ ಹೇಮಂತ್ ಕುಮಾರ್ ರವರು ಮೋಟಾರು ಸೈಕಲನ್ನು ಅಜಾಗರೂಕತೆಯಿಂದ ಚಾಲನೆ ಮಾಡಿ ಮುಂದಿನಿಂದ ಬರುತ್ತಿದ್ದ ಮಾರುತಿ ವ್ಯಾನಿಗೆ ಡಿಕ್ಕಿ ಪಡಿಸಿದ್ದು, ಅಭಿಷೇಕ್ ಮತ್ತು ಹೇಮಂತ್ ಕುಮಾರ್ ರವರಿಗೆ ಗಾಯಗಳಾಗಿದ್ದು, ಅಭಿಷೇಕ್ ರವರು ನೀಡಿದ ದೂರಿನ ಮೇರೆಗೆ ಗೋಣಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಗೂಡ್ಸ್ ಆಟೋ ಅಪಘಾತ
            ದಿನಾಂಕ 15-2-2017 ರಂದು ಚೇಲವಾರ ಗ್ರಾಮದ ನಿವಾಸಿ ಶಂಕರರವರು ತಮ್ಮ ಬಾಪ್ತು ಗೂಡ್ಸ್ ಆಟೋದಲ್ಲಿ ಚಾಲಕ ದಿನೇಶರವರೊಂದಿಗೆ ಮೂರ್ನಾಡುವಿನಿಂದ ಕೊಂಡಂಗೇರಿಗೆ ಹೋಗುತ್ತಿರುವಾಗ ಆಟೊವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಾಲನೆ ಮಾಡಿ ರಸ್ತೆಯ ಪಕ್ಕದ ಗುಂಡಿಗೆ ಬೀಳಿಸಿದ ಪರಿಣಾಮ ಆಟೋ ಜಖಂ ಗೊಂಡಿದ್ದು, ಈ ಬಗ್ಗೆ ಶಂಕರರವರು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಬ್ಯಾಂಕ್ ವಿವರ ಕೇಳಿ ವಂಚಿಸಲು ಯತ್ನ
         ಮಡಿಕೇರಿ ತಾಲೂಕಿನ ಮುತ್ತಾರ್ಮುಡಿ ಗ್ರಾಮದ ನಿವಾಸಿ ಬಿ ಎಂ ತಿಮ್ಮಯ್ಯ ಎಂಬುವವರಿಗೆ ಮೊ ಸಂ 917654971568 ರಿಂದ ಅಪರಿಚಿತ ವ್ಯಕ್ತಿಯು ಕರೆ ಮಾಡಿ ಮಾತನಾಡಿ ನಾನು ಬ್ಯಾಂಕಿನ ಮ್ಯಾನೇಜರ್ ಮಾತಾಡುವುದು, ನಿಮ್ಮ ಎ.ಟಿ.ಎಂ ನ್ನು ಬಂದ್ ಮಾಡಬೇಕಾಗಿದೆ, ನಿಮ್ಮ ಎ.ಟಿ.ಎಂ ನಂ ಕೊಡಿ ಎಂದು ಕೇಳಿ ವಂಚಿಸಲು ಪ್ರಯತ್ನಿಸಿದ್ದು ಈ ಬಗ್ಗೆ ತಿಮ್ಮಯ್ಯನವರು ದಿನಾಂಕ 15-2-2017 ರಂದು ನೀಡಿದ ದೂರಿನ ಮೇರೆಗೆ ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುತ್ತಾರೆ.
          ಇಂತಹ ಘಟನೆಗಳು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ವರದಿಯಾಗುತ್ತಿದ್ದು ಸಾರ್ವಜನಿಕರಿಗೆ ಯಾವುದೇ ಅನಾಮಧೇಯ ವ್ಯಕ್ತಿಯಿಂದ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುವುದು ಇತ್ಯಾದಿ ಮಾಡಿದಲ್ಲಿ ಅಂತಹ ಕರೆಗಳಿಗೆ ಸ್ಪಂದಿಸದೇ ಜಾಗ್ರತೆ ರಾದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಸಹಕಾರಿಯಾಗುತ್ತದೆ.

Wednesday, February 15, 2017

ಶಾಲೆಗೆ ನುಗ್ಗಿ ಕಳ್ಳತನ
            ದಿನಾಂಕ 13-2-2017 ರಂದು ರಾತ್ರಿ ವಿರಾಜಪೇಟೆ ತಾಲೂಕಿನ ಹುದಿಕೇರಿಯ ಜನತಾ ಪ್ರೌಢ ಶಾಲೆಗೆ ಯಾರೋ ಅಪರಿಚಿತರು ನುಗ್ಗಿ ಮುಖ್ಯ ಶಿಕ್ಷಕರ ಕೊಠಡಿಯಿಂದ 5,000 ರೂ ನಗದು ಹಾಗೂ ಒಂದು ಮೊಬೈಲ್ ಫೋನನ್ನು ಕಳವು ಮಾಡಿದ್ದು ಈ ಬಗ್ಗೆ ಶಾಲೆಯ ಅದ್ಯಕ್ಷರಾದ ಮುದ್ದಪ್ಪನವರು ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

ಕೆಲಸ ಮಾಡುವಾಗ ಮರ ಬಿದ್ದು ಮಹಿಳೆಯ ಆಕಸ್ಮಿಕ ಮರಣ
           ದಿನಾಂಕ 14-2-2017 ರಂದು ಸುಂಟಿಕೊಪ್ಪದ 7ನೇ ಹೊಸಕೋಟೆಯ ನಿವಾಸಿ ಚಂದ್ರರವರ ಪತ್ನಿ ಶೋಭಾರವರು ಹೊಸಕೋಟೆ ಗ್ರಾಮದ ಸಂದೀಪ್ ರವರ ಕಾಫಿ ತೋಟಕ್ಕೆ ಕಾಫಿ ಕುಯ್ಯಲು ಕೂಲಿ ಕೆಲಸಕ್ಕೆ ಹೋಗಿದ್ದು, ಕೆಲಸ ಮಾಡುತ್ತಿರುವಾಗ ಗಾಳಿ ಬಂದು ಬಳಂಜಿ ಮರ ತುಂಡಾಗಿ ಶೋಭರವರ ಮೇಲೆ ಬಿದ್ದು ಮೃತಪಟ್ಟಿದ್ದು, ಈ ಬಗ್ಗೆ ಶೋಭರವರ ಪತಿ ಚಂದ್ರರವರು ನೀಡಿದ ದೂರಿನ ಮೇರೆಗೆ ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

Tuesday, February 14, 2017

ಮದ್ಯಪಾನ ಮಾಡಿದ ವ್ಯಕ್ತಿ ನೀರಿಗೆ ಬಿದ್ದು ಸಾವು:

      ಮದ್ಯಪಾನ ಮಾಡಿದ ವ್ಯಕ್ತಿಯೋರ್ವ ನೀರಿಗೆ ಬಿದ್ದು ಸಾವನಪ್ಪಿದ ಘಟನೆ ಕುಶಾಲನಗರ ಸಮೀಪದ ಹಾರಂಗಿ ಹೊಳೆಯಲ್ಲಿ ಸಂಭವಿಸಿದೆ. ಕುಶಾಲನಗರ ಗ್ರಾಮಾಂತರ ಠಾಣಾ ವ್ಯಾಪ್ತಿಯ ದೊಡ್ಡತ್ತೂರು ಗ್ರಾಮದ ನಿವಾಸಿ ರವಿಕುಮಾರ್ ಎಂಬಾತ ದಿನಾಂಕ 13-2-2017 ರಂದು ಮದ್ಯಪಾನ ಮಾಡಿಕೊಂಡು ಬಂದು ಸಮಯ 12-30 ಗಂಟೆಗೆ ಬಟ್ಟೆ ಹೊಗೆಯುವ ಮತ್ತು ಸ್ನಾನ ಮಾಡುವ ಸಲುವಾಗಿ ಹಾರಂಗಿ ಹೊಳೆಗೆ ಹೋಗಿ ಸ್ನಾನ ಮಾಡುತ್ತಿದ್ದ ವೇಳೆ ಆಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಮೃತವ್ಯಕ್ತಿಯ ತಂದೆಯಾದ ಆರ್. ಚಂದ್ರರವರು ನೀಡಿದ ದೂರಿನ ಮೇರೆಗೆ ಕುಶಾಲನಗರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿ ಮುಂದಿನ ಕ್ರಮ ಜರುಗಿಸಿರುತ್ತಾರೆ.

ಜಮೀನಿಗೆ ವ್ಯಕ್ತಿಯಿಂದ ಅಕ್ರಮ ಪ್ರವೇಶ, ಹಲ್ಲೆ:

     ಹಳೆ ದ್ವೇಷವನ್ನಿಟ್ಟುಕೊಂಡು ವ್ಯಕ್ತಿಯೋರ್ವ ಮತ್ತೊಬ್ಬ ವ್ಯಕ್ತಿಯ ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಲ್ಲೆ ನಡೆಸಿದ ಘಟನೆ ಮಡಿಕೇರಿ ತಾಲೋಕು ಪೆರೂರು ಗ್ರಾಮದಲ್ಲಿ ನಡೆದಿದೆ. ಪೆರೂರು ಗ್ರಾಮದ ನಿವಾಸಿ ಬಿ.ಸಿ. ಮೇದಪ್ಪ ಎಂಬವರು ದಿನಾಂಕ 12-2-2017 ರಂದು ಸಂಜೆ 4-00 ಗಂಟೆಯ ಸಮಯದಲ್ಲಿ ತಮ್ಮ ಜಮೀನಿನಲ್ಲಿ ಬಾಳೆ ಕೃಷಿಯನ್ನು ನೋಡಿಕೊಂಡಿರುವ ಸಮಯದಲ್ಲಿ ಆರೋಪಿಯಾದ ಅದೇ ಗ್ರಾಮದ ಸುಂದರ ಎಂಬವರು ಅಲ್ಲಿಗೆ ಬಂದು ಜಮೀನಿಗೆ ಅಕ್ರಮ ಪ್ರವೇಶ ಮಾಡಿ ಹಳೆ ದ್ವೇಷದ ಹಿನ್ನೆಲೆಯಲ್ಲಿ ಜಗಳ ಮಾಡಿ ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಗಾಯಪಡಿಸಿದ್ದಾರೆಂದು ನೀಡಿದ ದೂರಿನ ಮೇರೆಗೆ ನಾಪೋಕ್ಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆಗೆ ನುಗ್ಗಿ ಚಿನ್ನಾಭರಣ ಕಳವು:

      ವಿರಾಜಪೇಟೆ ನಗರ ಠಾಣಾ ಸರಹದ್ದಿನ ಮಗ್ಗುಲ ಗ್ರಾಮದ ಸಬಾಸ್ಟಿನ್ ಜಾನ್ ಲೋಬೋ ಎಂಬವರು ದಿನಾಂಕ 13-2-2017 ರಂದು ಬೆಳಿಗ್ಗೆ 8-45 ಗಂಟೆಗೆ ಮನೆಗೆ ಬೀಗ ಹಾಕದೇ ಕಾಫಿ ಕೆಲಸಕ್ಕೆ ಹೋಗಿ ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಯಾರೋ ಕಳ್ಳರು ಮನೆಯೊಳಗೆ ನುಗ್ಗಿ ಗಾಡ್ರೇಜ್ ಬೀರುವಿನ ಲಾಕರ್ ನ್ನು ತೆರೆದು 28 ಗ್ರಾಂ ಚಿನ್ನದ ಚೈನು ಮತ್ತು 4 ಗ್ರಾಂ ತೂಕದ 2 ಉಂಗುರಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ. 
ನಿಲ್ಲಿಸಿದ ಮಾರುತಿ ವ್ಯಾನ್ ಗೆ ಬೆಂಕಿ:
     ಶ್ರೀಮಂಗಲ ಠಾಣಾ ವ್ಯಾಪ್ತಿಯ ಬೆಳ್ಳೂರು ಗ್ರಾಮದ ನಿವಾಸಿ ನೂರೇರ ಅಯ್ಯಪ್ಪ ಎಂಬವರು ತಮ್ಮ ಬಾಪ್ತು ಮಾರುತಿ ವ್ಯಾನ್ ನ್ನು ಮನೆಯ ಹತ್ತಿರದ ಶೆಡ್ಡಿನಲ್ಲಿ ನಿಲ್ಲಿಸಿದ್ದು, ದಿನಾಂಕ 12-2-2017 ರಂದು ಸಮಯ 11-30 ಗಂಟೆಯ ಸಮಯದಲ್ಲಿ ಮನೆಯ ನಾಯಿ ಬೊಳಗಿದ ಶಬ್ದಕೇಳಿ ಮನೆಯಿಂದ ಹೊರಗಡೆ ಬಂದು ನೋಡಿದಾಗ ಶೆಡ್ಡಿನಲ್ಲಿ ನಿಲ್ಲಿಸಿದ್ದ ವ್ಯಾನಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದು, ಯಾರೋ ಕಿಡಿಗೇಡಿಗಳು ಫಿರ್ಯಾದಿ ಅಯ್ಯಪ್ಪನವರಿಗೆ ನಷ್ಟವನ್ನುಂಟುಮಾಡುವ ಉದ್ದೇಶದಿಂದ ಈ ಕೃತ್ಯವನ್ನು ಎಸಗಿರಬಹುದಾಗಿದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಶ್ರೀಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಿಸಿದ ಪೊಲೀಸರು ತನಿಖೆ ಕೈಗೊಂಡಿದ್ದಾರೆ.  

ಯುವಕ ಕಾಣೆ:

     ಪೊನ್ನಂಪೇಟೆ ಠಾಣಾ ಸರಹದ್ದಿನ ಮುಗುಟಗೇರಿ ಗ್ರಾಮದಲ್ಲಿ ವಾಸವಾಗಿರುವ ಪಿರ್ಯಾದಿ ಮೋಳಿ ಎಂಬವರ ಮಗ ಪ್ರಿನ್ಸ್ ನು ಮಾಪಿಳ್ಳೆತೋಡು ಬಾಜಿ ಎಂಬವರಲ್ಲಿ ಶಾಮಿಯಾನ ಕೆಲಸ ಮಾಡಿಕೊಂಡಿದ್ದು ದಿನಾಂಕ 4/01/2017 ರಂದು ಬೆಳಿಗ್ಗೆ 7-00 ಗಂಟೆಗೆ ಪಿರ್ಯಾದಿಯವರು ಗೋಣಿಕೊಪ್ಪ ಆಸ್ಪತ್ರೆಯಲ್ಲಿ ರುವಾಗ್ಗೆ ಮಗ ಪ್ರಿನ್ಸ್ ನು ಆಸ್ಪತ್ರೆಗೆ ಬಂದು ನಾನು ವಿರಾಜಪೇಟೆಯಲ್ಲಿರುವ ನನ್ನ ಸ್ನೇಹಿತ ಅಭಿಷೇಕ್ ರವರ ಮನೆಗೆ ಹೋಗಿ ಬರುತ್ತೇನೆಂದು ಹೇಳಿ ಹೋಗಿದ್ದು ಅದೇ ದಿನ ರಾತ್ರಿ ಪಿರ್ಯಾದಿಯವರು ಮಗನ ಮೊಬೈಲ್ ಗೆ ಕರೆ ಮಾಡಿದಾಗ ಸ್ವಿಚ್ ಆಪ್ ಆಗಿದ್ದು ನಂತರ ಸ್ನೇಹಿತ ಅಭಿಷೇಕ್ ನ ಮೊಬೈಲ್ ಗೆ ಕರೆ ಮಾಡಿ ಕೇಳಿದಾಗ ರಾತ್ರಿ 9-00 ಗಂಟೆಗೆ ವಿರಾಜಪೇಟೆ ಬಸ್ ನಿಲ್ದಾಣಕ್ಕೆ ಬಿಟ್ಟು ಬಂದಿರುವುದಾಗಿ ತಿಳಿದು ಬಂದಿದ್ದು, ಆದರೆ ಮಗ ಮನೆಗೆ ಬಾರದೇ ಕಾಣೆಯಾಗಿರುತ್ತಾನೆಂದು ಫಿರ್ಯಾದಿ ಮೋಳಿರವರು ನೀಡಿದ ದೂರಿನ ಮೇರೆಗೆ ಪೊನ್ನಂಪೇಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.